ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ದೇಶ ವಿದೇಶ ಹಕ್ಕಿಗಳ ಆಕರ್ಷಣೆಗೆ ಹೆಸರುವಾಸಿಯಾದ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆಯಲ್ಲಿ ರಾತ್ರಿ ಎಗ್ಗಿಲ್ಲದೆ ಮರಳು ಲೂಟಿ ನಡೆಯುತ್ತಿದ್ದು, ಅಕ್ರಮ ಮರಳು ದಂದೆಕೋರರಿಂದ ಕೆರೆಗೆ ಸಂಚಕಾರ ಬಂದೊದಗಿದೆ..!
ದಿನದಿಂದ ದಿನಕ್ಕೆ ಚಿನ್ನದ ಬೆಲೆಯಂತೆ ಮರಳಿಗೂ ಬಾರಿ ಬೆಲೆ ಬಂದಿದ್ದು, ಮರಳು ದಂದೆಕೋರರಿಗೆ ನಿಡಶೇಸಿ ಕೆರೆ ಅಂಗಳದಲ್ಲಿ ಚಿನ್ನದ ಗಣಿ ಸಿಕ್ಕಂತಾಗಿದೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿರುವ ಮರಳನ್ನು ಲೂಟಿಕೋರರಿಂದ ರಕ್ಷಣೆ ಮಾಡಲು ಯಾರೂ ಇಲ್ಲದಂತಾಗಿದೆ. ಯಾವುದೇ ಭೀಕರತೆ ಇಲ್ಲವಾಗಿರುವುದರಿಂದ ರಾತ್ರಿ ಸಮಯದಲ್ಲಿ ಟ್ರ್ಯಾಕ್ಟರ್ ಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದು, ಸರ್ಕಾರಕ್ಕೆ ಸೇರಬೇಕಾದ ಮರಳು ರಾಜಧನ (ರಾಯಲ್ಟಿ) ದಂಧೆಕೋರರ ಜೇಬು ತುಂಬುತ್ತಿರುವುದಂತು ಸುಳ್ಳಲ್ಲ.
ವಿರೂಪಗೊಳ್ಳುತ್ತಿರುವ ಕೆರೆ : ಸುಮಾರು 327 ಹೆಕ್ಟೇರ್ ಪ್ರದೇಶ ವ್ಯಾಪ್ತಿಯ ಈ ನಿಡಶೇಸಿ ಕೆರೆಯನ್ನು ಕುಷ್ಟಗಿ ಪಟ್ಟಣದ ಹಾಗೂ ಗ್ರಾಮೀಣ ಭಾಗದ ಜನರು ಸೇರಿ ತಮ್ಮ ಸಹಭಾಗಿತ್ವದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಕೇರೆ ಪುನಶ್ಚೇತನ ಕಾರ್ಯ ಕೈಗೊಂಡಿದ್ದರು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಹೊಂದಿದ ನಿಡಶೇಸಿ ಕೆರೆಯ ಅಭಿವೃದ್ಧಿ ಕಾರ್ಯ ರಾಜ್ಯಕ್ಕೆ ಮಾದರಿಯಾಗಿತ್ತು. ಕಂದಾಯ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆ ವಿಸ್ತರಣೆ ಅಳತೆ ಮಾಡಿ ಒಂದು ರೂಪ ಕೊಟ್ಟಿದ್ದರು. ಇದರಿಂದ ಒತ್ತುವರಿಯಾಗಿದ್ದ ಕೆರೆ ಅಂಗಳ ತನ್ನ ಅಸ್ತಿತ್ವ ಉಳಿಸಿಕೊಂಡಿತ್ತು. ಈ ಕೆರೆಯ ಒಂದು ಭಾಗದಲ್ಲಿ ಸುಮಾರು 23 ಹೆಕ್ಟೇರ್ ಮರಳು ಇರುವುದನ್ನು ಅಧಿಕಾರಿಗಳು ಪತ್ತೆ ಮಾಡಿ ಅದನ್ನು ಇಲಾಖೆಯ ಸುಪರ್ದಿಗೆ ಪಡೆದುಕೊಂಡಿತ್ತು. ದಿನಗಳು ಕಳೆದಂತೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದರಿಂದ ಮರಳು ಲೂಟಿಕೋರರಿಗೆ ಚಿನ್ನದ ನಿಕ್ಷೇಪ ಸಿಕ್ಕಂತಾಗಿದೆ. ನಿಡಶೇಸಿ ಕೆರೆಯನ್ನು ಆಕರ್ಷಣೆಯ ತಾಣವನ್ನಾಗಿ ಮಾಡಲು ಕೆರೆಯ ಒಂದು ಭಾಗದಲ್ಲಿ ಸರ್ಕಾರ ಉದ್ಯಾನವನ ನಿರ್ಮಾಣ ಮಾಡುತ್ತಿದೆ. ಅಷ್ಟೇ ಅಲ್ಲದೆ ಕೆರೆ ಹೂಳೆತ್ತುವ ಸಂದರ್ಭದಲ್ಲಿ ವಲಸೆ ಬರುವ ಹಕ್ಕಿಗಳಿಗೆ ತಂಗಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಕೆರೆಯ ಅಂಗಳದ ಮಧ್ಯ ಭಾಗದಲ್ಲಿ ನಡುಗಡ್ಡೆಗಳನ್ನು ನಿರ್ಮಿಸಿ ಅದರಲ್ಲಿ ತರಹೇವಾರಿ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಆದರೆ, ಒಂದೆಡೆ ಕೆರೆ ಸುಂದರ ರೂಪ ಪಡೆಯುತ್ತಿದ್ದರೆ ಇನ್ನೊಂದೆಡೆ ಮರಳು ಲೂಟಿಕೊರರಿಂದ ವಿರೂಪಗೊಳ್ಳುತ್ತಿರುವುದಂತು ಸತ್ಯ.
ಒಡ್ಡು ಹಾಳು : ಈ ಬೃಹದಾಕಾರದ ಕೆರೆ ಒತ್ತುವರಿಯಾಗದಂತೆ ತಡೆಗಟ್ಟಲು ಕೆರೆ ಸುತ್ತಲೂ ಸುಮಾರು 5 ಕೀ.ಮೀ. ಮಣ್ಣಿನ ಬಂಡಿನ ಒಡ್ಡು ನಿರ್ಮಿಸಲಾಗಿದೆ. ಆದರೆ, ರಾತ್ರಿ ವೇಳೆ ಮರಳು ಕಳ್ಳತನ ಮಾಡಲು ತೆರಳುವ ಟ್ರ್ಯಾಕ್ಟರ್ ಗಳಿಗೆ ಸಂಚರಿಸಲು ಅನುಕೂಲವಾಗಲು ಮಣ್ಣಿನ ಒಡ್ಡನ್ನು ತೆರವುಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಕೆರೆಯ ಅಷ್ಟು ನೀರನ್ನು ಒಂದು ಭಾಗದಲ್ಲಿರುವ ತಡೆ ಹಿಡಿಯುವ ಕಲ್ಲಿನ ಬಂಡಿಗೆ ಧಕ್ಕೆ ಉಂಟಾಗುತ್ತಿದೆ. ಯಾಕೆಂದರೆ, ಬಂಡಿನ ಕೂಗಳತೆ ದೂರದಲ್ಲಿಯೇ ಮರಳು ಲೂಟಿ ಮಾಡಲು ಬೃಹದಾಕಾರದ ಗುಂಡಿಗಳನ್ನು ಅಗೆಯಲಾಗುತ್ತಿದೆ. ಕಲ್ಲುಗಳಿಂದ ನಿರ್ಮಿಸಿದ ಸುರಕ್ಷಿತ ಒಡ್ಡು ಹಾಳಾಗಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕೆರೆ ಸುತ್ತಮುತ್ತಲಿನ ಗ್ರಾಮಸ್ಥರು ಹೇಳುತ್ತಿದ್ದಾರೆ. ಈಗಲಾದರೂ ನಿಡಶೇಸಿ ಕೆರೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮರಳು ಮತ್ತು ಕೆರೆ ಸಂರಕ್ಷಣೆಗೆ ಮುಂದಾಗುತ್ತಾರೋ ಇಲ್ಲವೋ ಕಾದು ನೋಡಬೇಕಿದೆ..!!