ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಭೂಮಿಗೆ ಬೀಳುವ ಹನಿ ನೀರು ಕೂಡಾ ವ್ಯರ್ಥವಾಗದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಅಭಿಪ್ರಾಯವ್ಯಕ್ತಪಡಿಸಿದರು..!
ಅವರು ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇ ಗೋಣ್ಣಾಗರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಸ್ಥಳೀಯ ಕೆರೆ ಅಭಿವೃದ್ಧಿ ಸಮಿತಿ ಸಹಭಾಗಿತ್ವದಲ್ಲಿ ಜರುಗಿದ 369 ನೇ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ಕೆರೆ ಪುನಶ್ಚೇತನ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಂತರ್ಜಲ ಮಟ್ಟ ಸಾವಿರ ಅಡಿಗಳ ಆಳ ತಲುಪಿ ಹೋಗಿದೆ. ಇನ್ನೂ ನಾವು ಎಚ್ಚರವಾಗಿಲ್ಲ. ಪ್ರತಿಯೊಬ್ಬರು ನೀರಿನ ಮಹತ್ವವನ್ನು ಅರಿಯಬೇಕಾಗಿದೆ. ನೆಲಕ್ಕೆ ಬೀಳುವ ನೀರು ನಿಲ್ಲಿಸಬೇಕು… ನಿಂತ ನೀರು ನೆಲದಲ್ಲಿ ಇಂಗಬೇಕು ಎಂಬ ಸೂತ್ರದಲ್ಲಿ ಎಲ್ಲರೂ ನಡೆದುಕೊಳ್ಳಬೇಕಾಗಿದೆ ಎಂದು ಶಾಸಕರು ನೆರದಿದ್ದ ರೈತರಿಗೆ ಸಲಹೆ ನೀಡಿದರು.
ಸಂಸ್ಥೆಯ ಯೋಜನಾಧಿಕಾರಿ ಶೇಖರ್ ನಾಯ್ಕ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ಯಾಮರಾವ್ ಕುಲಕರ್ಣಿ, ಗ್ರಾ ಪಂ ಅಧ್ಯಕ್ಷ ಕಳಕಪ್ಪ ಕಾಡದ, ಜನಜಾಗ್ರತಿ ವೇದಿಕೆ ಉಪಾಧ್ಯಕ್ಷ ವೀರಣ್ಣ ಬಂಗಾರ ಶೆಟ್ಟರ, ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಹಿರೇಮಠ, ಆರ್.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಶೇಖರಗೌಡ ಪಾಟೀಲ, ಕೃಷಿ ಮೇಲ್ವಿಚಾರಕ ರವಿಚಂದ್ರ, ಸಂಸ್ಥೆಯ ಮಹಿಳಾ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶಿವಲೀಲಾ, ವಲಯ ಮೇಲ್ವಿಚಾರಕ ಶಾಂತಮೂರ್ತಿ ಹಿರೇಮಠ, ಒಕ್ಕೂಟದ ಅಧ್ಯಕ್ಷ ಈಶ್ವರಪ್ಪ ಸೇರಿದಂತೆ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಸೇವಾ ಪ್ರತಿನಿಧಿಗಳಾದ ಸುವರ್ಣ, ಶರಣಗೌಡ, ಚೆನ್ನಬಸಮ್ಮ, ಶಿವರಾಜ್, ಹುಲಿಗೆಮ್ಮ, ಮಲ್ಲಿಕಾರ್ಜುನ ಇನ್ನಿತರರಿದ್ದರು.
ಸಂಸ್ಥೆಯ ಕೃಷಿ ಮೇಲ್ವಿಚಾರಕ ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು. ಶಾಂತಮೂರ್ತಿ ಹಿರೇಮಠ ಸ್ವಾಗತಿಸಿದರು. ಸ್ಥಳೀಯ ಮುಖಂಡ ರಂಗಪ್ಪ ವಾಲಿಕಾರ ವಂದಿಸಿದರು.