ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಇರಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ತೆರವುಗೊಳಿಸಿದ ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ನಡೆ ಖಂಡಿಸಿ 02-02-2022ರಂದು ಜಿಲ್ಲೆಯ ಕುಷ್ಟಗಿ ನಗರದಲ್ಲಿ ವಿವಿಧ ದಲಿತ ಮತ್ತು ಪ್ರಗತಿಪರ ಹಾಗೂ ರೈತ ಸಂಘಟನೆಗಳು ನೀಡಿದ್ದ ಒಂದು ದಿನ ಬಂದ್ ಯಶಸ್ವಿಯಾಗಿದೆ..!
ನಗರದಲ್ಲಿ ಬೆಳಿಗ್ಗೆ 6 ರಿಂದ ಕೆಲ ಅಂಗಡಿ ಮುಗ್ಗಟ್ಟು ಸ್ವಯಂಪ್ರೇರಿತ ಬಂದ್ ಮಾಡಿದ್ದರು. ಇನ್ನೂ ಕೆಲ ಹೂ ವ್ಯಾಪಾರ ಸೇರಿದಂತೆ ಕೆಲ ಸಣ್ಣಪುಟ್ಟ ಅಂಗಡಿಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಗೊಳಿಸಲಾಗಿತ್ತು. ಸಂತೆ ಮಾರುಕಟ್ಟೆ, ಎಪಿಎಂಸಿ ಯಾರ್ಡ್, ಪೆಟ್ರೋಲ್ ಬಂಕ್ ಬಂದ್ ಆಗಿದ್ದರಿಂದ ದೈನಂದಿನ ಕೆಲಸಕ್ಕೆ ಪಟ್ಟಣಕ್ಕೆ ಆಗಮಿಸಿದ್ದ ಗ್ರಾಮೀಣರು ಪರದಾಡಿದರು. ಅಹಿತಕರ ಘಟನೆ ಮುಂಜಾಗ್ರತಾ ಕ್ರಮವಾಗಿ ಕೆಎಸ್ ಆರ್ ಟಿಸಿ ಬಸ್ ಗಳು ಪಟ್ಟಣದೊಳಗೆ ಸಂಚಾರಿಸದೇ ಇರುವುದು ಕಂಡುಬಂತು. ಜತೆಗೆ ಗ್ರಾಮೀಣ ಭಾಗದಿಂದ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು ವಾಹನ ಸೌಲಭ್ಯವಿಲ್ಲದೆ ಪರಿತಪಿಸಿದ ಪ್ರಸಂಗವು ಜರುಗಿತು.
ಮೆರವಣಿಗೆ : ಮದ್ಯಾಹ್ನ ನಗರದ ಬುತ್ತಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡ ವಿವಿಧ ದಲಿತ ಮತ್ತು ಪ್ರಗತಿಪರ ಹಾಗೂ ರೈತ ಸಂಘಟನೆಯ ಕಾರ್ಯಕರ್ತರು ರಸ್ತೆಗೆ ಇಳಿದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಾರುತಿ ವೃತ್ತದ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾಕಾರರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇರುವ ಭಾವುಟ ಹಿಡಿದು ರಾಯಚೂರು ಜಿಲ್ಲಾ ನ್ಯಾಯಾಧೀಶನ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿ ನಿಯೋಜಿಸಿ ಬಿಗೀ ಬಂದೋಬಸ್ತ್ ಏರ್ಪಡಿಸಿದ್ದರು.
ಬಳಿಕ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿಗೆ ತೆರಳಿದರು. ಪ್ರತಿಭಟನಾ ನೇತೃತ್ವ ವಹಿಸಿದ್ದ ವಿವಿಧ ಸಂಘಟನೆಗಳ ಪ್ರಮುಖರು, ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಇರಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಫೋಟೋ ತೆರವುಗೊಳಿಸಿದ ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೆಲಸದಿಂದ ಅವರನ್ನು ವಜಾಗೊಳಿಸಿ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ನೀಡಿದರು..!!