ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ತಾಲೂಕಾ ಕಛೇರಿಯನ್ನು ಕೊಪ್ಪಳ ರಸ್ತೆಯ ಖಾಸಗಿ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟಿಸಲಾಗಿತು..!
6-02-2022 ರಂದು ಜರುಗಿದ ಸರಳ ಸಮಾರಂಭದಲ್ಲಿ ಕಚೇರಿಯನ್ನು ಉದ್ಘಾಟಿಸಲಾಗಿತು. ಕಚೇರಿ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆರೋಗ್ಯ ರಕ್ಷಾ ಯೋಜನೆ ಅಡಿಯಲ್ಲಿ ಆಯ್ಕೆಯಾದ ಸುಮಾರು ಇಪ್ಪತ್ತು ಫಲಾನುಭವಿಗಳಿಗೆ ಸಂಸ್ಥೆಯಿಂದ ತಲಾ ಹತ್ತು ಸಾವಿರ ರೂ.ಗಳ ಮೊತ್ತದ ಚೆಕ್ ಅನ್ನು ಕಲ್ಯಾಣ ಕರ್ನಾಟಕ ಕೊಪ್ಪಳ ಪ್ರಾದೇಶಿಕ ನಿರ್ದೇಶಕ ಪುರುಶೋತ್ತಮ ಪಿ.ಕೆ ವಿತರಿಸಿದರು.
ಜಿಲ್ಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಡಿ 3.500 ಸ್ವಸಹಾಯ ಸಂಘಗಳಿವೆ , 24 ಸಾವಿರ ಮಹಿಳೆಯರು ಸಂಘದ ಸದಸ್ಯರಾಗಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಇರುವ ಯುನಿಯನ್ ಬ್ಯಾಂಕ್ ನಲ್ಲಿ ಸಂಸ್ಥೆ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರ ಆರ್ಥಿಕ ಸ್ವಾವಲಂಬನೆ ವೃದ್ಧಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇಲ್ಲಿಯವರೆಗೂ 66 ಕೋಟಿ ರೂಪಾಯಿಗಳ ಸಾಲವನ್ನು ಮಹಿಳೆಯರಿಗೆ ನೀಡಲಾಗಿದೆ. ಅತಿ ಕಡಿಮೆ ಬಡ್ಡಿಯ ಹಾಗೂ ಕಡಿತ ಬಡ್ಡಿ ಸಾಲ ನೀಡಲಾಗುತ್ತಿದೆ. ಇದರಿಂದ ಅತಿಹೆಚ್ಚು ಮಹಿಳೆಯರು ತಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ ಹೇಳಿದರು. ಕಳೆದ ಒಂಬತ್ತು ವರ್ಷಗಳಲ್ಲಿ ಸಂಸ್ಥೆ ಸಾಕಷ್ಟು ಬೆಳವಣಿಗೆ ಕಂಡಿದ್ದು, ಸೇವಾ ಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಿದೆ. ಜತೆಗೆ ಸಂಸ್ಥೆಯಿಂದ ಮಹಿಳೆಯರಿಗೆ ಆರ್ಥಿಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು ಪೈನಾನ್ಸ್ ಎಂದು ತಪ್ಪು ಕಲ್ಪನೆ ಇಟ್ಟುಕೊಳ್ಳಬಾರದು. ಈ ಸಂಸ್ಥೆ ಸರ್ಕಾರಿ ಸಾಮ್ಯದ ಖಾಸಗಿ ಸಂಸ್ಥೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಮುಖಂಡರಾದ ದೇವೆಂದ್ರಪ್ಪ ಬಳೂಟಗಿ, ವೀರೇಶ ಬಂಗಾರಶೆಟ್ಟರ್, ಡಾ.ವಿ.ಬಿ.ಹಿರೇಮಠ, ಸಂಸ್ಥೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹಾಗೂ ಸಿಬ್ಬಂದಿ ವರ್ಗ ಮತ್ತು ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಹಾಜರಿದ್ದರು..!!