ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿಯಲ್ಲಿ ಕೈ ಮತ್ತು ಕಮಲ ಪಡೆ ನಾಯಕರುಗಳು ಅನುದಾನ ಲೂಟಿ ಆರೋಪಗಳ ಕೆಸರಾಟದಲ್ಲಿ ತೊಡಗಿಕೊಂಡಿದ್ದಾರೆ..?
ಇತ್ತೀಚೆಗೆ ಜರುಗಿದ ಸಾಮಾನ್ಯ ಸಭೆಯಲ್ಲಿ ಪುರಸಭೆಯ ಬಿಜೆಪಿ ಸದಸ್ಯರೊಬ್ಬರು, ಸ್ಥಳೀಯ ಶಾಸಕರು ಪಟ್ಟಣದ ಅಭಿವೃದ್ಧಿಗಾಗಿ ಜಾರಿಗೆ ಬಂದಿದ್ದ ಐಪಿಡಿಎಸ್ ಯೋಜನೆಯ ವಿದ್ಯುತ್ ಕಾಮಗಾರಿಯ ಅನುದಾನವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆರೋಪಕ್ಕೆ ಪ್ರತಿಯಾಗಿ ಶಾಸಕ ಬಯ್ಯಾಪೂರು, ಲೂಟಿ ಕುರಿತು ದಾಖಲೆ ನೀಡಿದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಸುದ್ದಿ ಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು. ಆದರೆ, ಕೊನೆಗೊಳ್ಳದ ಶಾಸಕ ಹಾಗೂ ಕಮಲ ಸದಸ್ಯರ ನಡುವಿನ ಆರೋಪಗಳ ಜಟಾಪಟಿ ಮಾತ್ರ ನಿರಂತರವಾಗಿ ಮುಂದುವರೆದಿದ್ದು, ಗೊಂದಲದಲ್ಲಿರುವ ಕುಷ್ಟಗಿ ಪಟ್ಟಣದ ಜನತೆ, ಸತ್ಯಾಸತ್ಯತೆ ತಿಳಿಯಲು ಕಾತುರದಲ್ಲಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಪಟ್ಟಣಕ್ಕೆ ವಿದ್ಯುತ್ ದೀಪದ ಕಂಬ ಅಳವಡಿಕೆ, ಕಬ್ಬಿಣದ ಕಂಬಗಳ ಬದಲಾವಣೆ, ನೂತನ ವಿದ್ಯುತ್ ಪರಿವರ್ತಕ ಅಳವಡಿಕೆ, ತಂತಿಬೇಲಿ ಅಳವಡಿಕೆ, ವಿದ್ಯುತ್ ತಂತಿ ಅಳವಡಿಕೆ ಸೇರಿದಂತೆ ಇತರೆ ವಿದ್ಯುತ್ ಕಾಮಗಾರಿಗೆ ಐಪಿಡಿಎಸ್ ಯೋಜನೆಯಡಿ ಪಟ್ಟಣಕ್ಕೆ 5.20 ಕೋಟಿ ರೂಪಾಯಿಗಳ ಅನುದಾನ ಮಂಜೂರಾಗಿರುವುದು ತಿಳಿದುಬಂದಿತ್ತು. ಸ್ಥಳೀಯ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಪಟ್ಟಣದ 20ನೇ ವಾರ್ಡ್ ಸಂತೆ ಬಯಲಿನಲ್ಲಿ ಕಾಮಗಾರಿ ಆರಂಭಿಸಲು ಚಾಲನೆ ಸಹ ನೀಡಿದ್ದರು. ಆದರೆ, ಕಾಮಗಾರಿ ಗುತ್ತಿಗೆ ಪಡೆದವರಿಂದ ನಾನಾ ಕಾರಣ ವೊಡ್ಡಿ ಕಾಮಗಾರಿ ನಿಲ್ಲಿಸಿರುವುದು ತಿಳಿದುಬಂದಿದೆ. ಮಂಜೂರಾದ ಅನುದಾನದಲ್ಲಿ ಅರೆ ಬರೆ ಕಾಮಗಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಪಟ್ಟಣದ 23 ವಾರ್ಡ್ ಗಳಲ್ಲಿ ಕಾಮಗಾರಿ ಸಂಪೂರ್ಣ ನಡೆದಿಲ್ಲ. ಈ ಕುರಿತು ಕಳೆದ ಎಂಟತ್ತು ತಿಂಗಳುಗಳಿಂದ ಜೆಸ್ಕಾಂ ಉಪ ವಿಭಾಗದ ಎಇಇ ಕುಷ್ಟಗಿ ಮತ್ತು ಗಂಗಾವತಿ ವಿಭಾಗದ ಜೆಸ್ಕಾ ಎಇ ಅವರನ್ನು ಪುರಸಭೆ ಅಧ್ಯಕ್ಷ ಗಂಗಾಧರಯ್ಯ ಹಿರೇಮಠ ಹಾಗೂ ಸದಸ್ಯ ಕಲ್ಲೇಶ ತಾಳದ ಅವರು ಮಾಹಿತಿ ಕೋರಿದರೂ ನೀಡುತ್ತಿಲ್ಲ. ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದರೂ ಕೂಡಾ ಪ್ರಯೋಜನವಾಗುತ್ತಿಲ್ಲ. ಈ ಕುರಿತು ಸಾಕಷ್ಟು ಸಾರಿ ಶಾಸಕ ಬಯ್ಯಾಪೂರ ಅವರ ಗಮನಕ್ಕೆ ತಂದರೂ ಕಾಮಗಾರಿ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಯಾವುದೇ ವಾರ್ಡಗಳಲ್ಲೂ ವಿದ್ಯುತ್ ಕಾಮಗಾರಿ ಯಾವ ಪ್ರಮಾಣದಲ್ಲಿ ಜರುಗಿದೆ ಎಂದು ಗಮನಿಸಿದರೂ ಎಲ್ಲಿಯೂ ಕಂಡುಬಂದಿಲ್ಲ. ಹಳೇ ವಿದ್ಯುತ್ ಕಬ್ಬಿಣದ ಕಂಬಗಳು ಹಾಗೇ ಇವೆ. ಹಳೇ ವಿದ್ಯುತ್ ಪರಿವರ್ತಕಗಳು ಕೂಡಾ ಹಾಗೇ ಇವೆ. ಕೆಲವಡೆ ಅಳವಡಿಸಿದ ಟಿಸಿಗಳಿಗೆ ತಂತಿಬೇಲಿ ಇಲ್ಲದೇ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕಾಮಗಾರಿ ನಡೆಯದೇ ಇದ್ದರೂ ಶಾಸಕರು, ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಯಾರು ಎಂಬುದೇ ಗೊತ್ತಿಲ್ಲ ಎಂಬ ಹೇಳಿಕೆಯ ಹಿಂದೆ ಅನುದಾನ ಲೂಟಿಯಾಗಿದೆ ಎಂಬುದು ಸಾಬೀತು ಪಡಿಸುತ್ತಿದ್ದು, ಅಧಿಕಾರಿಗಳ ಕುರಿತು ಶಾಸಕರಿಗೆ ಸಂಪರ್ಕ ಇಲ್ಲವೆಂದರೆ ಹೇಗೆ ಎಂದು ಆರೋಪಿಸುತ್ತಿರುವ ಪುರಸಭೆ ಅಧ್ಯಕ್ಷ ಗಂಗಾಧರಯ್ಯ ಹಿರೇಮಠ ಹಾಗೂ ಕಲ್ಲೇಶ ತಾಳದ ಇತರೆ ಬಿಜೆಪಿ ಸದಸ್ಯರು, ಶಾಸಕ ಬಯ್ಯಾಪೂರ ಮಹಾ ಲೂಟಿಕೋರರಾಗಿದ್ದಾರೆ. ಜನರಿಗೆ ಇದರ ಸತ್ಯಾಸತ್ಯತೆ ತಿಳಿಸಬೇಕು ಎಂದು ಹರಿಹಾಯುತ್ತಿದ್ದಾರೆ. ಆದರೆ, ಶಾಸಕ ಬಯ್ಯಾಪೂರ ಮಾತ್ರ ನನಗೆ ಲೂಟಿ ಎಂಬ ಪದವೇ ಗೊತ್ತಿಲ್ಲ. ಬಿಜೆಪಿ ಸದಸ್ಯರಲ್ಲಿ ದಾಖಲೆಗಳಿದ್ದರೆ ಮಾರ್ಚ್ ಮೊದಲನೇ ವಾರದಲ್ಲಿ ಬಹಿರಂಗ ಪಡಿಸಲಿ ಸಂತೆ ಬಯಲು ಬನ್ನಿಮಹಾಂಕಾಳಿ ದೇವಸ್ಥಾನದ ಮುಂದೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವುದು ಪಟ್ಟಣದ ಜನತೆಯಲ್ಲಿ ಸಾಕಷ್ಟು ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸತ್ಯಾಸತ್ಯತೆ ತಿಳಿಯಲು ಇಲ್ಲಿನವರು ಕಾತುರರಾಗಿರುವುದಂತು ಸತ್ಯ..!?