ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ದೆಹಲಿ ಅಲೆದಾಟದಲ್ಲಿ ಬ್ಯೂಜಿಯಾಗಿದ್ದಾರೆ ಎಂದು ಕೃಷ್ಣಾ ಬಿ ಸ್ಕೀಂ ಹೋರಾಟ ಸಮಿತಿ ಪ್ರಮುಖ ಗಂಗಾಧರ ಕುಷ್ಟಗಿ ಆರೋಪಿಸಿದರು..!
ಅವರು ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ವಾರದಲ್ಲಿ ಹತ್ತಾರು ಬಾರಿ ದೆಹಲಿ ಅಲೆದಾಟದಲ್ಲಿ ಸಿಎಂ ನಿರತರಾಗಿರುವುದರಿಂದ ರಾಜ್ಯದ ಅಭಿವೃದ್ಧಿ ಕಡೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲೊಂದಾದ ಕೃಷ್ಣಾ ಮೇಲ್ದಂಡೆ ಯೋಜನೆಗಳ ಜಾರಿಗೆ ರಾಜ್ಯದ 25 ಲೋಕಸಭೆ ಸದಸ್ಯರು ಯಾರು ಕೂಡಾ ಚರ್ಚಿಸುತ್ತಿಲ್ಲ. ಮೋದಿಯವರ ಎಡ ಮತ್ತು ಬಲ ಎಂದು ಗುರುತಿಸಿಕೊಂಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಇಲ್ಲಿನ ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಯೋಜನೆಗಳ ಜಾರಿಗೆ ಈ ಹಿಂದೆ ಗೃಹ ಮಂತ್ರಿಯಾಗಿದ್ದಾಗ ಸ್ವತಃ ಬೊಮ್ಮಾಯಿ ಅವರೆ ನಿಯೋಗ ಕೊಂಡೊಯ್ಯಲು ನಿರ್ಧರಿಸಿ, ಅನುದಾನ ತರುವ ಹೇಳಿಕೆ ನೀಡಿದ್ದರು. ಆದರೆ, ಅವರ ಮಗ ಬಿಟ್ ಕ್ವಾಯಿನ್, ಡ್ರಗ್ಸ್ , ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತಮ್ಮ ಕುರ್ಚಿಗೆ ಎಲ್ಲಿ ಚುತಿ ಬರಬಹುದು ಎಂಬ ಕಾರಣದಿಂದ ಮೌನಕ್ಕೆ ಶರಣಾಗಿರುವುದು ಉತ್ತರ ಕರ್ನಾಟಕ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಕೃಷಿಕರಿಗೆ ದ್ರೋಹ ಬಗೆದಿದ್ದಾರೆ ಎಂದರು. ಕರ್ನಾಟಕವನ್ನು ಪ್ರತಿನಿಧಿಸಿದವರಿಗೆ ಪ್ರಧಾನಿ ನರೇಂದ್ರ ಮೋದಿ ಬಳಿ ನಿಂತು ಧ್ವನಿ ಎತ್ತುವ ತಾಕತ್ತು ಇಲ್ಲ. ಇಲ್ಲಿನವರು ದೈರ್ಯ ಕಳೆದುಕೊಂಡಿದ್ದಾರೆ. ಇವರಿಗೆ ಬದ್ಧತೆ ಇಲ್ಲದಂತಾಗಿದೆ ಎಂದು ಗಂಗಾಧರ ಕುಷ್ಟಗಿ ಆರೋಪವ್ಯಕ್ತಪಡಿಸಿದರು..!!