ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಸದ್ಯ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬುದು ಸುದ್ದಿಯಾಗುತ್ತಿದ್ದಂತೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿನ ಕಿರಾಣಿ ವರ್ತಕರು ಕೃತಕ ಅಭಾವ ಸೃಷ್ಟಿಸುವ ಮೂಲಕ ಗ್ರಾಹಕರಿಂದ ಹೆಚ್ಚಿನ ಹಣ ಸುಲಿಗೆಗೆ ಇಳಿದಿರುವುದು ಬೆಳಕಿಗೆ ಬಂದಿದೆ..!
ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ಯುದ್ಧ ಆರಂಭವಾಗಿ ಇಂದಿಗೆ ನಾಲ್ಕೈದು ದಿನಗಳು ಕಳೆದಿವೆ. ಆದರೆ, ಈ ಹಿಂದಿನಿಂದಲೂ ಭಾರತಕ್ಕೆ ಉಕ್ರೇನ್ ದೇಶದಿಂದ ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಯುದ್ಧದ ಹಿನ್ನೆಲೆ ಬೆಲೆ ಏರಿಕೆ ಸಾಧ್ಯತೆ ಇದೆ ಎಂಬ ವರದಿ ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಇಲ್ಲಿನ ಕಿರಾಣಿ ಅಂಗಡಿಯವರು ಮುಂಬೈ ಮೂಲಕ ಆಮದು ಆಗುವ ಫಾಲ್ಮೋಲಿನ್ ಅಡುಗೆ ಎಣ್ಣೆಯನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಜನವರಿ ತಿಂಗಳಲ್ಲಿ ಪ್ಯಾಕೇಜ್ ಆದ ಒಂದು ಲೀಟರ್, ಅರ್ದಾ ಲೀಟರ್ ಅಡುಗೆ ಎಣ್ಣೆ ಪಾಕೀಟ್ ಪ್ರಿಂಟ್ ಗಿಂತ ಹತ್ತಿಪ್ಪತ್ತು ರೂ. ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಯುದ್ಧದ ನೆಪವೊಡ್ಡುವ ಕಿರಾಣಿ ಅಂಗಡಿ ವರ್ತಕರು ಕೃತಕ ಅಭಾವ ಸೃಷ್ಟಿಸಿ ಗ್ರಾಹಕರಿಂದ ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ಈ ಭಾಗದಲ್ಲಿ ಹೆಚ್ಚಾನೆಚ್ಚು ಸೂರ್ಯಕಾಂತಿ ಎಣ್ಣೆ ಉಪಯೋಗಿಸುವದು ಅತಿ ವಿರಳ. ಫಾಲ್ಮೋಲಿನ್ ಆಯಿಲನ್ನೆ ಹೆಚ್ಚು ಅವಲಂಬಿಸಿದ್ದಾರೆ. ಆದರೆ, ವರ್ತಕರಿಂದ ಮೋಸ ನಡೆಯುತ್ತಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ. ಸಂಬಂಧಿಸಿದ ಆಹಾರ ಇಲಾಖೆ ಅಧಿಕಾರಿಗಳು ಈ ಕುರಿತು ಗಮನಹರಿಸಿ ಗ್ರಾಹಕರಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯ ವ್ಯಕ್ತವಾಗುತ್ತಿರುವದಂತು ಸತ್ಯ..!!