ಜೀರೋ ಅಕೌಂಟ್ ಹೆಸರಲ್ಲಿ ರೈತರಿಗೆ ವಂಚನೆ


 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಜೀರೋ ಅಕೌಂಟ್ ಮಾಡಿಸುವುದಾಗಿ ಪ್ರತಿ ರೈತರಿಂದ ಸಾವಿರ ರೂಪಾಯಿ ಹಣ ಪಡೆದ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದ SBI ಬ್ಯಾಂಕ್ ಕಸ್ಟಮರ್ ಸರ್ವಿಸ್ ಪಾಯಿಂಟ್ ಸಿಬ್ಬಂದಿ ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ..!?

ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮಸ್ಥರು 28-02-2022ರಂದು ಕುಷ್ಟಗಿ ಪಟ್ಟಣದ SBI ಬ್ಯಾಂಕ್ ವ್ಯವಸ್ಥಾಪಕರಿಗೆ ಭೇಟಿ ನೀಡಿ ಈ ಕುರಿತು ದೂರು ನೀಡಿದ ಪ್ರಸಂಗ ಜರುಗಿತು.

ನಡೆದದ್ದೇನು? : ಹಿರೇನಂದಿಹಾಳ ಗ್ರಾಮದಲ್ಲಿ ತೆರೆಯಲಾಗಿರುವ SBI ಬ್ಯಾಂಕ್ ಕಸ್ಟಮರ್ ಸರ್ವಿಸ್ ಪಾಯಿಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಸಾಪುರ ಗ್ರಾಮದ ಕರಿಯಪ್ಪ ಗೊಲ್ಲರ ಎಂಬ ಸಿಬ್ಬಂದಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಗ್ರಾಮದ ರೈತರಿಗೆ ಜೀರೋ ಅಕೌಂಟ್ ಮಾಡಿಸುವುದಾಗಿ ತಲಾ ಖಾತೆ ತೆರೆಯಲು ಬೇಕಾಗುವ ಫೋಟೋ, ಆಧಾರ ಕಾರ್ಡ್ ಇತರೆ ದಾಖಲೆಗಳನ್ನು ಪಡೆದು, ಪ್ರತಿಯೊಬ್ಬರಿಂದ ಒಂದು ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದಾನೆ. SBI ಬ್ಯಾಂಕ್ ಖಾತೆ ಚಾಲ್ತಿ ಆದ ಬಳಿಕ ಅದರಲ್ಲಿ ನಿಮ್ಮ ಹಣ ಜಮಾವಣೆಯಾಗಿರುತ್ತದೆ ಎಂದು ತಿಳಿಸಿರುತ್ತಾನೆ. ಆದರೆ, ಕೆಲ ದಿನಗಳ ಬಳಿಕ ಬ್ಯಾಂಕ್ ಗೆ ಭೇಟಿ ನೀಡಿ ತಮ್ಮ ತಮ್ಮ ಖಾತೆ ಪರಿಶೀಲಿಸಿದಾಗ ಹಣ ಜಮೆ ಆಗದಿರುವುದು ತಿಳಿದುಬಂದಿದೆ. ಈ ಕುರಿತು SBI ಬ್ಯಾಂಕ್ ವ್ಯವಸ್ಥಾಪಕರ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ. ಮೋಸಕ್ಕೊಳಗಾದ ಸುಮಾರು 25ರಿಂದ 30 ಜನ ಅಮಾಯಕ ರೈತರು ನಿತ್ಯ ಪಟ್ಟಣದ ಬ್ಯಾಂಕ್ ಗೆ ಅಲೆಯುವಂತಾಗಿದೆ ಎಂದು ಆರೋಪಿಸುತ್ತಿರುವ ಗ್ರಾಮಸ್ಥರಾದ ಭೀಮನಗೌಡ, ಹನುಮಂತ, ಪರಸಪ್ಪ ಹೊಸಮನಿ, ಶರಣಪ್ಪ ವಜ್ರಬಂಡಿ, ಕನಕರಾಯ ಮತ್ತಿತರರು ‘ಕೃಷಿ ಪ್ರಿಯ’ ಪತ್ರಿಕೆಗೆ ತಮಗೆ ಆಗಿರುವ ಅಳಲು ತೋಡಿಕೊಂಡರು.
ಬಳಿಕ SBI ಬ್ಯಾಂಕ್ ವ್ಯವಸ್ಥಾಪಕರಿಗೆ ಸಿ.ಎಸ್.ಸಿ ಸಿಬ್ಬಂದಿ ವಂಚಿಸಿದರ ಕುರಿತು ವಿವರಿಸುವ ಮೂಲಕ ವಂಚನೆಗೆ ಒಳಗಾದ ಎಲ್ಲಾ ರೈತರ ಜೀರೋ ಅಕೌಂಟ್ ನಲ್ಲಿ ತಮ್ಮ ಸೇವಾ ಕೇಂದ್ರದ ಸಿಬ್ಬಂದಿಯಿಂದ ಹಣ ಜಮೆ ಮಾಡಿಸಬೇಕು ಜತೆಗೆ ಆತನನ್ನು ಕೆಲಸದಿಂದ ವಜಾಗೊಳಿಸಿ ಹಿರೇನಂದಿಹಾಳ ಗ್ರಾಮದವರನ್ನೇ ಸೇವಾ ಕೇಂದ್ರಕ್ಕೆ ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ SBI ಬ್ಯಾಂಕ್ ವ್ಯವಸ್ಥಾಪಕ, ಕಸ್ಟಮರ್ ಸರ್ವಿಸ್ ಪಾಯಿಂಟ್ ಸಿಬ್ಬಂದಿ ಬಳಿ ಹಣ ಪಾವತಿಸಿದ ರಸೀದಿ ಇರುವುದು ಸಾಕ್ಷಿಕರಿಸಿ. ಪ್ರತಿ ಖಾತೆದಾರರು ತಮ್ಮ ಖಾತೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ದೂರು ಪತ್ರ ನೀಡಿದರೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಬಳಿಕ ಮೇಲಧಿಕಾರಿಗಳ ಆದೇಶದ ಮೇರೆಗೆ ಕ್ರಮಕೈಗೊಳ್ಳುವದಾಗಿ ತಿಳಿಸಿದರು..!!