ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಮಗೇರಿ ಗ್ರಾಮದ ರೈತರೊಬ್ಬರು ಒಣ ದ್ರಾಕ್ಷಿ ಕೃಷಿಯಲ್ಲಿ ಯಶಸ್ವಿಯಾಗುವ ಮೂಲಕ ತಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಂಡಿದ್ದಾರೆ..!
ರವಿಕುಮಾರ ಶೇಖರಗೌಡ ಪೊಲೀಸ್ ಪಾಟೀಲ್ ಅವರೇ ಒಣ ದ್ರಾಕ್ಷಿ ಕೃಷಿಯಲ್ಲಿ ಯಶಸ್ವಿಯಾದ ಪ್ರಗತಿಪರ ರೈತ. ಒಂದು ಹೆಕ್ಟೇರ್ ಜಮೀನಿನಲ್ಲಿ ದ್ರಾಕ್ಷಿ ಬೆಳೆಯಲು ಮುಂದಾದ ರೈತ ಇಲ್ಲಿಯವರೆಗೆ ಸಾಂಪ್ರದಾಯಿಕ ಬೆಳೆಗಳಿಗೆ ಮಾರು ಹೋಗಿ ಕೈ ಸುಟ್ಟುಕೊಂಡಿದ್ದ. ಆದರೆ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಏನಾದರೂ ಸಾಧಿಸಬೇಕು ಎಂಬ ಛಲದಿಂದ ಮುನ್ನುಗ್ಗಿ ಕಲ್ಲು ಮಿಶ್ರಿತ ಕೆಂಪು ಭೂಮಿಯಲ್ಲಿ ಡಾಗರೇಜ್ ಸಸಿಗಳ ನಾಟಿಗೆ ಮುಂದಾಗಿದ್ದಾನೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಆರೋಗ್ಯಯುತ ಸಸ್ಯೋಪಚಾರದ ‘ತಮ್ ಸಮ್’ ತಳಿಯ ದ್ರಾಕ್ಷಿ ಕಡ್ಡಿಗಳನ್ನು ಕಸಿ ಮಾಡುವ ಮೂಲಕ ಸಮೃದ್ಧ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ. ಸಸಿಯಿಂದ ಸಸಿಗೆ 5 ಅಡಿ, ಸಾಲಿನಿಂದ ಸಾಲಿಗೆ 11 ಅಡಿ ಅಳತೆಯಲ್ಲಿ ಸಸಿಗಳನ್ನು ನಾಟಿ ಮಾಡಿ, ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಟವರ್ ಮಾದರಿಯಲ್ಲಿ ದ್ರಾಕ್ಷಿ ಬೆಳೆಯುವ ಮೂಲಕ ಮೊದಲನೇ ವರ್ಷ 17 ಟನ್ ಇಳುವರಿ ಪಡೆದು, 36 ರೂಪಾಯಿಗಳ ದರದಲ್ಲಿ ತೋಟದಲ್ಲಿಯೇ ಮಾರಾಟ ಮಾಡಿದ್ದಾನೆ. ಎರಡನೇ ವರ್ಷ ಮಾತ್ರ ಹವಾಮಾನ ವೈಪರೀತ್ಯಗಳಿಂದ ಹಾಗೂ ವಿಪರಿತ ಸುರಿದ ಕುಂಭ ದ್ರೋಣ ಮಳೆ ಸುರಿದ ಹಿನ್ನಲೆಯಲ್ಲಿ ಇಳುವರಿಯಲ್ಲಿ 15 ಟನ್ ಪಡೆದು, 34 ರೂಪಾಯಿಗಳಿಗೆ ಮಾರಾಟಮಾಡಿ ಹಾನಿ ಅನುಭವಿಸಿದ್ದಾನೆ. ಆದರೆ, ಮೂರನೇ ಬೆಳೆಗೆ ಮಾತ್ರ ದೊಡ್ಡ ಸಾಹಸದ ಕೆಲಸಕ್ಕೆ ಕೈ ಹಾಕುವ ಮೂಲಕ ದ್ರಾಕ್ಷಿ ಒಣ ಹಾಕುವುದಕ್ಕೆ (ಮಣಕ ಮಾಡುವುದು) ಮುಂದಾಗಿದ್ದಾನೆ. ಈ ಭಾಗದಲ್ಲಿ ಮೊದಲ ಪ್ರಯೋಗಕ್ಕೆ ಮುಂದಾಗಿರುವುದು ವಿಶೇಷ. ಕೇವಲ ವಿಜಯಪುರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಒಣ ದ್ರಾಕ್ಷಿ ಕೃಷಿ ಪದ್ಧತಿ ಕುಷ್ಟಗಿ ಭಾಗದಲ್ಲಿ ಯಶಸ್ವಿಯಾಗಿರುವುದಕ್ಕೆ ಜಮೀನು ಮಾಲಿಕರ ಬಗ್ಗೆ ಹೆಮ್ಮೆಯಿಂದ ಹೇಳುತ್ತಾನೆ ರೈತ ಶೇಖರಪ್ಪ ಗಂಗನಾಳ..!!