ಸಂವಿಧಾನ ತಿದ್ದುಪಡಿ ಆಗಬೇಕು : ಅರಳಿ ನಾಗರಾಜ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಚುನಾಯಿತರಾದವರನ್ನು ಕೆಳಗಿಳಿಸುವುದಕ್ಕೆ ಸಂವಿಧಾನ ತಿದ್ದುಪಡಿ ಜರೂರ ಆಗಬೇಕಿದೆ ಎಂದು ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಅಭಿಪ್ರಾಯ ವ್ಯಕ್ತಪಡಿಸಿದರು..!

ಜಿಲ್ಲೆಯ ಕುಷ್ಟಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೃಷಿ ಪ್ರಿಯ ಪತ್ರಿಕೆವೊಂದಿಗೆ ಮಾತನಾಡಿ, ದೇಶದ ಶಾಸಕಾಂಗ ವ್ಯವಸ್ಥೆ ಹದಗೆಟ್ಟು ಹೋಗಿದೆ. ಶಾಸಕಾಂಗದ ವಿವಿಧ ಸ್ತರಗಳಿಗೆ ಆಯ್ಕೆಯಾಗುವ ಚುನಾಯಿತ ಪ್ರತಿನಿಧಿಗಳು ಮೂಲ ಆಶಯಗಳಿಗೆ ತೀಲಾಂಜಲಿಟ್ಟು ಅಸಂವಿಧಾನಿಕವಾಗಿ ನಡೆದುಕೊಳ್ಳುವವರನ್ನು ಮರಳಿ ಕರೆಯಿಸಿಕೊಳ್ಳುವುದಕ್ಕೆ ಸಂವಿಧಾನ ತಿದ್ದುಪಡಿ ಆಗಲೇಬೇಕೆಂದು ಪ್ರತಿಪಾದಿಸಿದರು. ನಮ್ಮಿಂದ ಆಯ್ಕೆಯಾದವರು, ತಮ್ಮ ಹಿತಾಸಕ್ತಿಗೆ ತಮ್ಮ ಮೂಲ ಪಕ್ಷದ ತತ್ವಗಳಿಗೆ ತಿಲಾಂಜಲಿ ಹೇಳುತ್ತಾರೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಪಡೆಯುವವರು ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳುತ್ತಾರೆ. ಅಲ್ಲದೆ, ಸಂವಿಧಾನದ ಮೂಲ ಆಶೆಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಜನಹಿತಕ್ಕಾಗಿ ಅಲ್ಲದೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮತ್ತು ಅಧಿಕಾರದ ಹಪಹಪಿಗಾಗಿ ಪಕ್ಷಾಂತರವಾಗುವ ಮೂಲಕ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ಇನ್ನೊಂದು ಪಕ್ಷ ಸೇರ್ಪಡೆಯಾಗುವ ಚುನಾಯಿತ ಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕೆಂದರೆ, ಚುನಾಯಿತರಾದವರನ್ನು ಮರಳಿ ಕರೆತರುವ ನಿಯಮಕ್ಕಾಗಿ ಸಂವಿಧಾನದ ತಿದ್ದುಪಡಿ ಅವಶ್ಯಕತೆ ಇದೆ ಎಂದರು.

ಜೆ.ಪಿ ಹೋರಾಟ ಸ್ಮರಣೆ :

ಚುನಾಯಿತರಾದವರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಸ್ಪಷ್ಟವಾದರೇ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡವರನ್ನು ಮರಳಿ ಅಧಿಕಾರದಿಂದ ಕೆಳಗಿಳಿಸುವ ನಿಯಮ ಜಾರಿಗಾಗಿ ಸಂವಿಧಾನ ತಿದ್ದುಪಡಿ ಆಗಲೇಬೇಕೆಂಬುದಕ್ಕೆ 1970 ರ ಸುಮಾರಿಗೆ ಜಯಪ್ರಕಾಶ ನಾರಾಯಣ ಅವರು ಚಳುವಳಿ ಆರಂಭಿಸಿದ್ದರು. ಜೆಪಿ ಅವರ ಕನಸು ನನಸಾಗಬೇಕೆಂದರೆ, ಇಂದು ಸಂವಿಧಾನ ತಿದ್ದುಪಡಿ ಮೂಲಕ ಭ್ರಷ್ಟಾಚಾರ ಹಾಗೂ ಸಂವಿಧಾನ ವಿರೋಧಿ ರಾಜಕಾರಣಿಗಳಿಗೆ ಪಾಠವಾಗಬೇಕಾಗಿದೆ ಎಂದು ಜಯಪ್ರಕಾಶ ನಾರಾಯಣ ಹಾಗೂ ಅವರ ಉಗ್ರ ಹೋರಾಟದ ಕುರಿತು ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜರವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು..!!