ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಶತಮಾನದ ಹಿಂದೆ ಮೈಸೂರು ಒಡೆಯರು ಹುಟ್ಟು ಹಾಕಿದ ಕನ್ನಡ ಸಾಹಿತ್ಯ ಪರಿಷತ್ ಬೈಲಾವನ್ನು ಕಾಲಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಲಾಗಿದೆ ಎಂದು ರಾಜ್ಯ ಕಸಾಪ ಬೈಲಾ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ಹೇಳಿದರು..!
ಜಿಲ್ಲೆಯ ಕುಷ್ಟಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿನಾಂಕ 07-03-2022ರಂದು ಕೃಷಿ ಪ್ರಿಯ ಪತ್ರಿಕೆಗೆ ತಿಳಿಸಿದ್ದಿಷ್ಟು, ಸಂವಿಧಾನದ ಆರ್ಟಿಕಲ್ 368 ರಲ್ಲಿ ಕಾಲಕ್ಕೆ ಅನುಗುಣವಾಗಿ ಬೈಲಾ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಬೈಲಾದಲ್ಲಿ ಕನ್ನಡ ಓದು-ಬರಹ ಬಲ್ಲ 18 ವರ್ಷ ಮೇಲ್ಪಟ್ಟವರು ಮಾತ್ರ ಆಜೀವ ಸದಸ್ಯತ್ವ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ತಿಳಿಸಲಾಗಿದೆ. ಆದರೆ, ಇಂದು ಕಸಾಪದಲ್ಲಿ ಕನ್ನಡ ಓದು-ಬರಹ ಬಾರದವರು ಸುಮಾರು 20 ಸಾವಿರ ಜನ ಸದಸ್ಯತ್ವ ಪಡೆದುಕೊಂಡಿರುವುದು ತಿಳಿದುಬಂದ ಹಿನ್ನೆಲೆ ಮೂಲ ಬೈಲಾ ಪಾಲನೆಯೊಂದಿಗೆ ಅದಕ್ಕೆ ಧಕ್ಕೆ ಬಾರದಹಾಗೆ ತಿದ್ದುಪಡಿ ಮಾಡಲಾಗಿದೆ. ಪ್ರಸ್ತುತ ಕಾಲಘಟ್ಟದ ಅನುಗುಣವಾಗಿ ಬದಲಾವಣೆ ತರುವುದು ಅವಶ್ಯಕತೆ ಇದೆ. ಬದಲಾವಣೆ ಜಗದ ನಿಯಮ ಹಾಗಾಗಿ ಈಗಿನ ಬೈಲಾದಲ್ಲಿ ಕಸಾಪ ಸದಸ್ಯತ್ವ ಪಡೆದುಕೊಳ್ಳಲು ಇಚ್ಚಿಸುವವರು ಕನಿಷ್ಠ ಪ್ರಾಥಮಿಕ ಶಿಕ್ಷಣ 7ನೇ ತರಗತಿ ಓದಿರಬೇಕು. ಜತೆಗೆ ರಂಗ ಕಲಾವಿದರು, ನೃತ್ಯ ಕಲಾವಿದರು, ಸಂಗೀತ ಕಲಾವಿದರು, ಕುಶಲಕರ್ಮಿಗಳು, ರೈತರು, ಕಾರ್ಮಿಕರು, ಕನ್ನಡ ಹಿತ ರಕ್ಷಣೆಗಾಗಿ ಹೋರಾಡಿದವರಿಗೆ ಹಾಗೂ ನಾಡು, ನುಡಿ, ಜಲ ಇವುಗಳಿಗೆ ಹೋರಾಡಿದವರು ಓದು-ಬರಹ ಬಾರದಿದ್ದರೂ ಸಹ ಕಸಾಪ ಸದಸ್ಯರಾಗಿ ಸೇವೆ ಸಲ್ಲಿಸುವ ಮನಸ್ಸಿದ್ದಲ್ಲಿ’ ತಮ್ಮ ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರುತಿಸಿಕೊಂಡರೆ ಅಂಥವರಿಗೆ ವಿದ್ಯಾರ್ಹತೆ ರಿಯಾಯಿತಿ ಕೊಟ್ಟು ವಿನಾಯಿತಿ ಕೊಟ್ಟು ಸದಸ್ಯತ್ವ ಕೊಡಲಾಗುವದು ಎಂದು ತಿದ್ದುಪಡಿ ಮಾಡಿ ಹೊಸ ಬೈಲಾ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಕಸಾಪ ಸಂಘ-ಸಂಸ್ಥೆಗಳ ಪ್ರತಿನಿಧಿ ನಬಿಸಾಬ ಕುಷ್ಟಗಿ ಇದ್ದರು..!!