– ಪ್ರಿಯ ಓದುಗ ದೊರೆಗಳೇ..!
2021 ಮಾರ್ಚ 10 ರಂದು ‘ಕೃಷಿ ಪ್ರಿಯ’ ತಲೆ ಬರಹದ ಪತ್ರಿಕೆ (ವೆಬ್ ಪೋರ್ಟಲ್) ಲೋಕಾರ್ಪಣೆಗೊಂಡಿತು. ಅಂದಿನಿಂದ ನಿರಂತರವಾಗಿ ವರ್ಷವಿಡೀ ನಾಡಿಗೆ ವಿಭಿನ್ನ ಹಾಗೂ ವಿಶಿಷ್ಟತೆಯಿಂದ ಕೂಡಿದ ಸುದ್ದಿಗಳನ್ನು ನೀಡುವಲ್ಲಿ ನಮ್ಮ ತಂಡ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ. ಎಲ್ಲದರಲ್ಲಿ ಒಂದಾಗಿರದ ‘ಕೃಷಿ ಪ್ರಿಯ’ ಪತ್ರಿಕೆ ಹೊಸತನದ ಮೂಲಕ ನಾಡಿನ ಸಮಸ್ತ ಜನರ ಮನೆಮಾತಾಗಿ ಹೊರಹೊಮ್ಮಿರುವುದು ನಮಗೆ ಹೆಮ್ಮೆ ತಂದಿದೆ. ಲಕ್ಷಾಂತರ ಜನ ಓದುಗರ ಸಂಖ್ಯೆ ಹೊಂದಿದ ಪತ್ರಿಕೆಗೆ ಜಾಹೀರಾತುದಾರರಿಂದ ಹಿಡಿದು, ಸುದ್ದಿ ಮತ್ತು ಪತ್ರಿಕೆ ಬೆಳವಣಿಗೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವು ನೀಡಿದ ಎಲ್ಲ ಮಹನೀಯರಿಗೆ ಮೊದಲು ಋಣಿಯಾಗಿದ್ದೇವೆ. ಮುಂದೆಯು ಕೂಡಾ ತಮ್ಮ ಸಹಕಾರ ಇದೆ ರೀತಿ ಮುಂದುವರೆಯಲಿ ಎಂಬುದು ನಮ್ಮ ಆಶಯ..!
– ವರ್ಷವಿಡೀ ಸಾಧಕ ಪ್ರಿಯರ ಹುಡುಕಾಟ..!
ಪತ್ರಿಕೆಗೆ ವರ್ಷ ತುಂಬಿದ ಹಿನ್ನಲೆಯಲ್ಲಿ ಯಾವುದಾದರೂ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದು ಎಲೆಮರೆ ಕಾಯಿಯಂತಿರುವ ಸಾಧಕ ‘ಪ್ರಿಯ’ ರನ್ನು ವರ್ಷವಿಡಿ ಗುರುತಿಸುವ ಕೆಲಸದ ಜೊತೆಗೆ ಅವರ ಸಾಧನೆಯ ಕುರಿತು ಸಮಗ್ರ ವರದಿ ಬಿತ್ತರಿಸುವ ಸಾಹಸದ ಕೆಲಸಕ್ಕೆ ಪತ್ರಿಕೆ ಮುಂದಾಗಲಿದೆ. ವಿಶೇಷವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ,ಹೈನುಗಾರಿಕೆ, ಶಿಕ್ಷಣ, ಕ್ರೀಡೆ, ಸಿನಿಮಾ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಪೊಲೀಸ್, ಬ್ಯಾಂಕಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹನೀಯರನ್ನ ಗುರುತಿಸಿ, ಅವರ ಸಾಧನೆಯ ಕುರಿತಾಗಿರುವ ವರದಿಗಳನ್ನು ಬಿತ್ತರಿಸುವ ಮೂಲಕ ಸಮಾಜದಲ್ಲಿ ಬೆಳಕಿಗೆ ತರುವುದು ಅಲ್ಲದೆ, “ಪ್ರಿಯ” ಎಂಬ ಬಿರುದು (ಉದಾ : ದಾಳಿಂಬೆ ಪ್ರಿಯ, ದ್ರಾಕ್ಷಿ ಪ್ರಿಯ, ಪೊಲೀಸ್ ಪ್ರಿಯ, ಶಿಕ್ಷಕ ಪ್ರಿಯ ಇತ್ಯಾದಿ) ನೀಡಿ, ಸನ್ಮಾನಿಸಿ ಗೌರವಿಸುವ ಕೆಲಸಕ್ಕೆ ಪತ್ರಿಕೆ ಈಗಾಗಲೇ ತಿರ್ಮಾನಿಸಲಾಗಿದೆ..!!
ಸಂಪಾದಕರು
ಶರಣಪ್ಪ ಕುಂಬಾರ