ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಅಟಲ್ ಜೀ ಸಭಾ ಭವನವು ಮಾರ್ಚ 13 ರಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಾರ್ವಜನಿಕವಾಗಿ ಲೋಕಾರ್ಪಣೆಗೊಳ್ಳಲಿದೆ ಎಂದು ಸಮಾಜ ಸೇವಕ ಹಾಗೂ ಗುತ್ತಿಗೆದಾರ ರೇಹಮಾನಸಾಬ ದೊಡ್ಡಮನಿ ತಿಳಿಸಿದರು..!
ನೂತನವಾಗಿ ನಿರ್ಮಿಸಿದ ಅಟಲ್ ಜೀ ಸಭಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಸ್ಪಷ್ಟಪಡಿಸಿದರು. ನೂತನ ಶಾಲಾ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಉದ್ಘಾಟಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಸಂಗಣ್ಣ ಕರಡಿ ಉದ್ಘಾಟಿಸುವರು. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಕುಷ್ಟಗಿಯ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ನಿಡಶೇಸಿಯ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಯಲಬುರ್ಗಾದ ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಎಂ.ಗುಡದೂರು ನೀಲಕಂಠಯ್ಯ ತಾತನವರು, ಇಲಕಲ್ ಹಜರತ್ ಸೈಯದ್ ಶಾ ಅಬ್ದುಲ್ ಖಾದ್ರಿ ದಿವ್ಯ ಸಾನಿಧ್ಯವಹಿಸುವರು. ಶಾಸಕರಾದ ಕಳಕಪ್ಪ ಬಂಡಿ (ರೋಣ), ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ಕೆ.ಶರಣಪ್ಪ , ಹಸನಸಾಬ್ ದೋಟಿಹಾಳ, ಹಿರೇಬನ್ನಿಗೋಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿಬಾಯಿ ಹೊನ್ನಪ್ಪ ಅಳ್ಳಳ್ಳಿ, ತಹಸೀಲ್ದಾರ ಎಂ.ಸಿದ್ಧೇಶ, ಕೊಪ್ಪಳ ಜಿಪಂ ಯೋಜನಾಧಿಕಾರಿ ಟಿ.ಕೃಷ್ಣಮೂರ್ತಿ, ಕುಷ್ಟಗಿ ತಾಪಂ ಇಓ ಡಾ.ಜಯರಾಮ ಚವ್ಹಾಣ, ಬಿಇಓ ಚನ್ನಬಸಪ್ಪ ಮಗ್ಗದ, ಸಿಪಿಐ ನಿಂಗಪ್ಪ ಎನ್ ಆರ್ ಸೇರಿದಂತೆ ಇನ್ನಿತರರು ಭಾಗವಹಿಸುವರು. ಸುದ್ದಿಗೋಷ್ಠಿಯಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ಶಾಲೆಯ ಅಧ್ಯಕ್ಷೆ ಇಮಾಂಬಿ ರೇಹಮಾನಸಾಬ ದೊಡ್ಡಮನಿ, ಅಲ್ಲಾಸಾಬ್, ಹುಸೇನಬಿ, ಅಲ್ಲಾಬೀ, ಮಹಮ್ಮದ್ ಹುಸೇನ್ ಪಾಷಾ, ಸೈಫುಲ್ಲಾ, ಸಮ್ರೀನ್, ಸಾನಿಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜೀವನ ಬದಲಾಯಿಸಿದ ಗ್ರಾಮೀಣ ಕೃಪಾಂಕ :
ಪ್ರಥಮ ದರ್ಜೆ ಗುತ್ತಿಗೆದಾರ ರೇಹಮಾನಸಾಬ ದೊಡ್ಡಮನಿ ಅವರ ಜೀವನವನ್ನು ಗ್ರಾಮೀಣ ಕೃಪಾಂಕ ಬದಲಾಯಿಸಿತು ಎಂದರೆ ತಪ್ಪಾಗಲಾರದು. ಬಿ.ಎಸ್ಸಿ , ಬಿ.ಈಡಿ ಪದವಿಧರರಾದ ರೇಹಮಾನಸಾಬ ಕೆಲ ತಿಂಗಳುಗಳ ಕಾಲ ಸರಕಾರಿ ಶಾಲೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, 1999 ರಲ್ಲಿ ಗ್ರಾಮೀಣ ಕೃಪಾಂಕದ ಮೂಲಕ ಸರಕಾರಿ ಸೇವೆಗೆ ಸೇರಿದ ಕೆಲವರನ್ನು ಸರಕಾರ ನ್ಯಾಯಾಲಯದ ಆದೇಶದಿಂದ ಸೇವೆಯಿಂದ ಅವಾಗ ಕೈಬಿಡಲಾಯಿತು. ಗ್ರಾಮೀಣ ಕೃಪಾಂಕದಿಂದ ಸರಕಾರಿ ನೌಕರಿಯನ್ನು ಕಳೆದುಕೊಂಡ ರೇಹಮಾನಸಾಬರಿಗೆ ಅದೃಷ್ಟ ಕೂಡಿ ಬಂದು, ಗುತ್ತಿಗೆದಾರರಾಗಿ ಬೆಳೆದು, ಜಿಲ್ಲೆಯಲ್ಲಿಯೇ ಪ್ರಥಮ ದರ್ಜೆಯ ಗುತ್ತಿಗೆದಾರರಲ್ಲಿ ಇವರೊಬ್ಬರು. ಎಲ್ಲಾ ರೀತಿಯಲ್ಲಿ ಬೆಳೆದಿರುವ ರೇಹಮಾನಸಾಬ ಸಮಾಜ ಸೇವೆಗೆ ಸದಾ ಸಿದ್ಧ ಹಸ್ತರು. ಈಗಾಗಲೇ ಡಾ.ಅಬ್ದುಲ್ ಕಲಾಂ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ದಾರಿ ದೀಪವಾಗಿದ್ದಾರೆ. ಪ್ಯಾರಾಮೆಡಿಕಲ್ ಕಾಲೇಜನ್ನು ಆರಂಭಿಸುವ ಇರಾದೆ ಇವರದ್ದಾಗಿದೆ. ತಮ್ಮ ಜೀವನದ ಸಾಧನೆಗೆ ಕಿತ್ತು ತಿನ್ನುವ ಬಡತನ ಕಾರಣವಾಗಿತು. ಎಲ್ಲಾ ಶ್ರೇಯಸ್ಸು ಹೆತ್ತ ತಾಯಿಗೆ ಸಲ್ಲಬೇಕು ಎಂದು ಮನದಾಳದಿಂದ ನುಡಿದರು.
ಸಾಮೂಹಿಕ ವಿವಾಹ :
ಅಟಲ್ ಜೀ ಸಭಾ ಭವನದ ಉದ್ಘಾಟನೆ ಜೊತೆಗೆ ಏನಾದರೂ ಸಮಾಜಕ್ಕೆ ವಿಶೇಷವಾದ ಕೊಡುಗೆ ನೀಡಬೇಕು ಎಂಬ ಮಹದಾಸೆ ಮೂಲಕ ನಾಲ್ಕು ಜೊತೆ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿರುವುದು ರೇಹಮಾನಸಾಬ ಅವರ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು..!!