ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ 82,09,886=00 ರೂಪಾಯಿಗಳ ಅವ್ಯವಹಾರದಲ್ಲಿ ಭಾಗಿಯಾದ ಎನ್ನಲಾದ ಕಾರ್ಯದರ್ಶಿ ಹಾಗೂ ಲೆಕ್ಕಿಗ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ..!
ಸಂಘದಲ್ಲಿ ನಡೆದಿರುವ ಅವ್ಯವಹಾರದ ಹಿನ್ನೆಲೆಯಲ್ಲಿ ಪ್ರಭಾರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿಜಯಕುಮಾರ ಎಂಬುವರು ಕುಷ್ಟಗಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಿಷ್ಟು, 01-04-2004 ರಿಂದ ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಯದರ್ಶಿ ಬಸವರಾಜ ಮಲ್ಲಪ್ಪ ಹೊರಪ್ಯಾಟಿ, ಲೆಕ್ಕಿಗ ಸುಧೀರಕುಮಾರ ಬಸಯ್ಯ ಗೋನಾಳಮಠ ಎಂಬುವರು ಸಂಘದಲ್ಲಿ ಶೇರುದಾರ ಶಿಕ್ಷಕರ ನಕಲಿ ಖಾತೆ ಸೃಷ್ಟಿಸಿ ಸುಮಾರು 89,79,721 ರೂ. ಸಂಘದ ಹಣವನ್ನು ತಮ್ಮ ವಯಕ್ತಿಕ ಹಿತಾಸಕ್ತಿಗಾಗಿ ದುರುಪಯೋಗ ಪಡಸಿಕೊಂಡು ಸಂಘಕ್ಕೆ ನಷ್ಟವನ್ನುಂಟು ಮಾಡಿರುತ್ತಾರೆ. ಈ ಕುರಿತು 31-12-2019 ರಂದು ಸ್ವೀಕರಿಸಿದ 2018-2019 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ವ್ಯತ್ಯಾಸ ಕಂಡುಬಂದ ಕಾರಣ ಸದರಿಯವರ ಮೇಲೆ ತನಿಖೆ ನಡೆಸಲು ಕಲಂ, 64 ಕ.ಸ.ಸಂ. ಕಾಯ್ದೆ 1959 ರ ವಿಚಾರಣ ವರದಿಯ ಮೇಲೆ ಕಲಂ, 68 ಕ.ಸ.ಸಂ ಕಾಯ್ದೆ 1959 ರ ತನಿಖಾ ಆದೇಶದ ಮೇರೆಗೆ ಕ್ರಿಮಿನಲ್ ಮೊಕ್ಕದ್ದಮೆ ಹೂಡಲು ಕೊಪ್ಪಳ ಜಿಲ್ಲೆ ಸಹಕಾರ ಸಂಘಗಳ ಇಲಾಖೆ ಉಪ ನಿಬಂಧಕರು ಆದೇಶದಲ್ಲಿ ಸ್ಪಷ್ಟಪಡಿಸಿದ್ದರು. ದಿನಾಂಕ13-02-2022 ರಂದು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ್ದಂತೆ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಆಡಳಿತ ಮಂಡಳಿ ತೆಗೆದುಕೊಂಡ ತಿರ್ಮಾನದಂತೆ ಆರೋಪಿತರಿಗೆ ಸತತವಾಗಿ ಮೂರು ಬಾರಿ ನೋಟಿಸ್ ನೀಡಿದರೂ ಸಹ ಹಣ ಮರುಪಾವತಿ ಮಾಡಿರುವದಿಲ್ಲ ಎಂದು ಸಂಘದ ಪ್ರಭಾರಿ ಕಾರ್ಯದರ್ಶಿ ನೀಡಿರುವ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಗುನ್ನೆ ನಂ. 44/2022 ಕಲಂ, 406, 408, 409, 420, 465, 468, 471 ಸಹಿತ 34 ಐಪಿಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ..!!