ಸಿಡಿಲಿಗೆ ಯುವಕ,13 ಕುರಿ ಬಲಿ

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಅಬ್ಬರದ ಸಿಡಿಲಿಗೆ ಓರ್ವ ಕುರಿಗಾಯಿ ಯುವಕ ಸೇರಿದಂತೆ 13 ಕುರಿಗಳು ಬಲಿಯಾಗಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪದ ಹೊಮ್ಮಿನಾಳ ಗ್ರಾಮದ ಹೊರವಲಯದಲ್ಲಿ (ಶನಿವಾರ ರಾತ್ರಿ 19-03-2022) ಜರುಗಿದೆ..!

ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದ ಕುರಿಗಾರ ಸುನೀಲ ಯಮನಪ್ಪ ಬಸರಿಹಾಳ (19) ಮೃತ ನತದೃಷ್ಟ. ಭಾರಿ ಗುಡುಗು-ಸಿಡಿಲು ಬಿರುಗಾಳಿ ಆರ್ಭಟದೊಂದಿಗೆ ಜಿಲ್ಲೆಯ ಕುಷ್ಟಗಿ ತಾಲೂಕು ಜಿಲ್ಲೆಯ ವಿವಿಧೆಡೆ ಮಳೆಯ ಜೊತೆಗೆ ಆಲಿಕಲ್ಲು ಮಳೆ ಸುರಿದಿದೆ.

ಘಟನೆ ವಿವರ : ಕುಷ್ಟಗಿ ತಾಲೂಕಿನ ಹೊಮ್ಮಿನಾಳ ಗ್ರಾಮ ಸೀಮಾ ವ್ಯಾಪ್ತಿಯಲ್ಲಿ ಕುರಿ ಮೇಯಿಸಲೆಂದು ಯುವಕ ತೆರಳಿದಾಗ ಸಂಜೆ ದಿಢೀರನೆ ಸುರಿದ ಆಲಿಕಲ್ಲು ಮಳೆ, ಸಿಡಿಲಿಗೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜತೆಗೆ 13 ಕುರಿಗಳು ಸಹ ಸಾವನ್ನಪ್ಪಿವೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಹಿರಿಯ ಪಶು ವೈದ್ಯಾಧಿಕಾರಿ ಡಾ. ಸಿದ್ದಲಿಂಗಯ್ಯ ಶಂಕಿನ್ ಅವರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಿವರಿಸಿದ್ದಾರೆ.

ಭೇಟಿ : ಯುವಕ ಮೃತಪಟ್ಟ ಘಟನಾ ಸ್ಥಳಕ್ಕೆ ಕುಷ್ಟಗಿ ಸಿಪಿಐ ನಿಂಗಪ್ಪ ಎನ್.ಆರ್, ತಾವರಗೇರಾ ಪಿಎಸ್ಐ ವೈಶಾಲಿ ಜಳಕಿ, ಯಲಬುರ್ಗಾ ಸಿಪಿಐ ನಾಗರೆಡ್ಡಿ, ಬೇವೂರು ಪಿಎಸ್ಐ ಶೀಲಾ ಮೂಗುನಗೌಡರ ಭೇಟಿ ನೀಡಿ ಪರಿಶೀಲಿಸಿದ್ದಾರೆ..!

ಬಿರುಗಾಳಿಗೆ ಹಾನಿ : ಕುಷ್ಟಗಿ ತಾಲೂಕಿನ ಮಾವಿನ ಇಟಗಿ ತಾಂಡಾದಲ್ಲಿ ದನದ ಕೊಟ್ಟಿಗೆಯ ತಗಡಿನ ಶೇಡ್, ತಾವರಗೇರಾ ಭಾಗದ ಕನ್ನಾಳ ಗ್ರಾಮದಲ್ಲಿ ಎರಡು ದನದ ಕೊಟ್ಟಿಗೆ ಹಾಗೂ ಮನೆಗಳ ತಗಡಿನ ಮೇಲ್ಚಾವಣಿ ಬಿರುಗಾಳಿ ಆರ್ಭಟಕ್ಕೆ ಹಾರಿ ಹೋಗಿವೆ. ಅದೇ ರೀತಿ ತೆಮ್ಮಿನಾಳ ಗ್ರಾಮದಲ್ಲಿ ಮನೆಗಳು ಹಾನಿಗೊಳಗಾದ ಬಗ್ಗೆ ವರದಿಯಾಗಿದೆ.

ಪ್ರತ್ಯೇಕ ಘಟನೆ 17 ಕುರಿ ಬಲಿ :
ಕುಷ್ಟಗಿ ಸೀಮೆ ಟೆಂಗುಂಟಿ ಗ್ರಾಮದ ಹೊರವಲಯದಲ್ಲಿ ಹಾಕಲಾದ ಹಟ್ಟಿಯಲ್ಲಿ ಭೀಮಣ್ಣ ತಂದಿ ಹನುಮಂತ ಬೋಣಿ ಸಾ. ತಾವರಗೇರಾ ಎಂಬುವರಿಗೆ ಸೇರಿದ 11 ಕುರಿ, ಹನುಮಪ್ಪ ಗೌಡರ ಹನುಮಪ್ಪ ಸಾ.ರಾಂಪುರ ಎಂಬುವರಿಗೆ ಸೇರಿದ 3 ಕುರಿ, ಕನಕಗಿರಿ ತಾಲೂಕಿನವರಾದ ಗಿಡ್ಡಪ್ಪ ತಂದಿ ಮಲ್ಲಪ್ಪ ಗೊಲ್ಲರ್ ಸಾ.ಬಂಕಾಪುರ ಇವರಿಗೆ ಸೇರಿದ 3 ಕುರಿಗಳು ಸಾವನ್ನಪ್ಪಿವೆ ಎಂದು ಕುಷ್ಟಗಿ ಪಶು ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿವೆ.

ದಾಖಲೆ ಮಳೆ : ವರ್ಷದ ಮೊದಲ (ಕೆಡಕು) ಮಳೆ ದಾಖಲೆ ಪ್ರಮಾಣದಲ್ಲಿ ಸುರಿದಿದೆ. ರೈತರ ವಾಡಿಕೆಯಂತೆ “ಕಾಮಣ್ಣನ ಕುಳ್ಳು ತೊಯಿಸುವ ಬದಲಾಗಿ.. ಬೂದಿ ತೋಯ್ದಿದೆ”. ವರ್ಷದ ಆರಂಭದಲ್ಲಿಯೇ ಅರ್ಭಟಿಸಿದ ಮಳೆ ವರ್ಷವಿಡೀ ಸುರಿಯಬೇಕೆಂಬುದು ಮತ್ತು ಹಾನಿಗೊಳಗಾದ ಕುರಿಗಾರ ಯವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂಬುದು ಕೃಷಿಕರ ಆಶಯ ಕೂಡಾ ಒಂದಾಗಿದೆ..!!

ಕುಷ್ಟಗಿ            : 14.4 ಮಿ.ಮೀ.
‌ಹನುಮಸಾಗರ : 22.1 ಮಿ.ಮೀ.
ಹನುಮನಾಳ   : 225.2 ಮಿ.ಮೀ.
ದೋಟಿಹಾಳ    : 20.1 ಮಿ.ಮೀ.
ಕಿಲ್ಲಾರಹಟ್ಟಿ      : 2.4 ಮಿ.ಮೀ.
ತಾವರಗೇರಾ    : 10.2 ಮಿ.ಮೀ ಮಳೆ ಮಾಪನ ಕೇಂದ್ರದಲ್ಲಿ ಮಳೆಯಾಗಿರುವ ಕುರಿತು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ.

ಸಚಿವ ಆಚಾರ ಭೇಟಿ : ಕುರಿಗಾರ ಯುವಕ ಸುನೀಲ ಯಮನಪ್ಪ ಬಸರಿಹಾಳ ಮೃತಪಟ್ಟಿರುವ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ ಭೇಟಿ ನೀಡಿ, ಮೃತ ಯುವಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸರಕಾರದಿಂದ ಸೂಕ್ತ ಪರಿಹಾರ ಒದಗಿಸುವುದಾಗಿ ಸಚಿವರು ಭರವಸೆ ನೀಡಿದರು.