ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಗ್ರಾಮಸ್ಥರ ಸಹಾಯದಿಂದ ನಿರ್ಮಿಸಿದ ಸ್ಮಾರ್ಟ್ ಕ್ಲಾಸ್ ನ ಸದ್ಭಳಕೆ ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಉಪಯೋಗವಾದಾಗ ಶಿಕ್ಷಕರಿಗೆ, ದಾನಿಗಳಿಗೆ ಹಾಗೂ ಗ್ರಾಮಕ್ಕೆ ಮತ್ತು ಇಲಾಖೆಗೆ ಬೆಲೆ ಬರುತ್ತದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಹೇಳಿದರು.
ಅವರು ತಾಲೂಕಿನ ಹನುಮಗಿರಿ ಶಾಲೆಯಲ್ಲಿ ನಡೆದ ಸರಸ್ವತಿ ಪೂಜಾ ಕಾರ್ಯಕ್ರಮ ಹಾಗೂ ಸಮುದಾಯ ಸಹಭಾಗಿತ್ವದಲ್ಲಿ ನಿರ್ಮಾಣವಾದ ಒಂದು ಲಕ್ಷ ರೂಪಾಯಿಗಳ ವೆಚ್ಚದ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು.
ಕುಷ್ಟಗಿ ತಾಲೂಕಿನ ಕಟ್ಟ ಕಡೆಯ ಗ್ರಾಮವಾಗಿರುವ ಹನುಮಗಿರಿ ಗ್ರಾಮದಲ್ಲಿ 2019-20 ನೇ ಸಾಲಿನಲ್ಲಿ 11 ಹಾಗೂ 2020-21ನೇ ಸಾಲಿನಲ್ಲಿ 10 ಮಕ್ಕಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆ ಆಗಿದ್ದಕ್ಕೆ, ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರ ಕಾರ್ಯವೈಖರಿ ತೃಪ್ತಿ ಅನಿಸುತ್ತದೆ. 2021-22 ನೇ ಸಾಲಿನಲ್ಲಿ ಹನುಮಗಿರಿ ಶಾಲೆಗೆ ಈಗಾಗಲೇ ಸ್ಮಾರ್ಟ್ ಕ್ಲಾಸ್ ಹೊಂದಿರುವ ಶಾಲೆಗಳಿಗೆ ಮತ್ತೊಂದು ಸ್ಮಾರ್ಟ್ ಕ್ಲಾಸನ್ನು ಸರಕಾರದಿಂದ ಮಂಜೂರು ಮಾಡಿಸುತ್ತೆನೆ ಎಂದು ಭರವಸೆ ನೀಡಿದರು.
ಜಿ.ಪಂ. ಮಾಜಿ ಸದಸ್ಯ ವಿಜಯ ನಾಯಕ ಮಾತನಾಡಿ, ಈ ಶಾಲಾಭಿವೃದ್ಧಿಯಿಂದ ನನಗೆ ತುಂಬಾ ಸಂತಸವಾಯಿತು. ಈ ಶಿಕ್ಷಕರ ಕಾರ್ಯವೈಖರಿಯನ್ನು ಇತರ ಎಲ್ಲಾ ಸುತ್ತಮುತ್ತಲಿನ ಗ್ರಾಮದವರು ಅನುಸರಿಸಬೇಕೆಂದರು.
ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಶೈಲ ಸೋಮನಕಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳು, ಸಿ.ಆರ್.ಪಿ, ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಶ್ರಮವೇ ಕಾರಣವೆಂದರು.
ಅಡವಿಭಾವಿ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಅಯ್ಯಪ್ಪ ಸುರುಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾಭಿವೃದ್ಧಿಯ ಬಗ್ಗೆ ಹಾಗೂ ಶಿಕ್ಷಕರ, ಮಕ್ಕಳ ಸಾಧನೆ ಮತ್ತು ಕಾರ್ಯವೈಖರಿ ಬಗ್ಗೆ ವಿವರಿಸಿ ಮಾತನಾಡಿದರು.
ಎಸ್.ಡಿ.ಎಮ್. ಸಿ ಅಧ್ಯಕ್ಷ ಪರಸಪ್ಪ ಹುನಗುಂದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕ ದೈಹಿಕ ಪರಿವೀಕ್ಷಕ ಧರ್ಮಕುಮಾರ ಕಂಬಳಿ, ಶಿಕ್ಷಣ ಸಂಯೋಜಕ ಶಿವಾನಂದ ಪಂಪಣ್ಣವರ್, ಫ್ರೌಢ ಶಾಲಾ ಮುಖ್ಯ ಶಿಕ್ಷಕ ರಾಜಕುಮಾರ ನಾಯ್ಕ, ಮುದೇನೂರು ಸಿ.ಆರ್.ಪಿ. ಸೋಮಲಿಂಗಪ್ಪ ಗುರಿಕಾರ, ಪಿ.ಡಿ.ಒ. ವೆಂಕಟೇಶ ನಾಯ್ಕ, ಗ್ರಾ.ಪಂ. ಅಧ್ಯಕ್ಷೆ ಯಂಕಮ್ಮ ಹರಿಜನ, ಸದಸ್ಯ ಶರಣಗೌಡ ಮತ್ತು ಗ್ರಾಮಸ್ಥರು, ಅಡವಿಭಾವಿ ಕ್ಲಸ್ಟರ್ ನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.
ಸಹ ಶಿಕ್ಷಕಿ ಕಲಾವತಿ ಜೆ ಪ್ರಾರ್ಥಿಸಿದರೆ, ಮುಖ್ಯ ಶಿಕ್ಷಕ ಶರಣಬಸಪ್ಪ ಹವಾಲ್ದಾರ್ ಸ್ವಾಗತಿಸಿದರು. ಶಿಕ್ಷಕರಾದ ಶ್ರೀನಿವಾಸ ಪಡಗಾನೂರು ನಿರೂಪಿಸಿದರು. ಬಸವರಾಜ ಬೇವೂರು ವಂದಿಸಿದರು..!!
(ಸುದ್ದಿ ಕೃಪೆ : ಬಸವರಾಜ ಬೋದುರು)