ಶರಣಪ್ಪ ಕುಂಬಾರ/ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : (ಕುಷ್ಟಗಿ) ರೇಷ್ಮೆ ಕೃಷಿಯಲ್ಲಿ ಅತ್ಯಧಿಕ ಇಳುವರಿ ಪಡೆದು, ತಮ್ಮ ಆದಾಯ ಇಮ್ಮಡಿಸಿಕೊಂಡು ಯಶಸ್ವಿಯಾಗಿರುವ ಕುಟುಂಬದ ಯಶೋಗಾಥೆ ಇದು..!
ಇಂತಹ ವಿಶಿಷ್ಟವಾದ ರೇಷ್ಮೆ ಕೃಷಿಯ ಕುಟುಂಬ ಬೇರೆ ಯಾವುದು ಅಲ್ಲ.. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ.ಬೋದುರು ಗ್ರಾಮದ ಶರಣಪ್ಪ ಹೊಳೆಯಪ್ಪ ಬಂಡಿಯವರದ್ದು. ಕಳೆದ ಎಂಟು ವರ್ಷಗಳಿಂದ ಈ ಕುಟುಂಬಕ್ಕೆ ಎಲ್ಲವೂ ‘ರೇಷ್ಮೆ ಬೆಳೆ’ ಅಂದರೆ ತಪ್ಪಾಗಲಾರದು. ತಮಗಿದ್ದ 14 ಎಕರೆ ಜಮೀನಿನಲ್ಲಿ 7 ಎಕರೆ ಜಮೀನನ್ನು ಹಿಪ್ಪು ನೇರಳೆ ಬೆಳೆಗಾಗಿಯೇ ಮೀಸಲಾಗಿರಿಸಿದ್ದು ವಿಶೇಷ. ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು, ಕೈ ಸುಟ್ಟುಕೊಂಡಿದ್ದ ಈ ಕುಟುಂಬಕ್ಕೆ ‘ಕೆಂಪು ಬಂಗಾರ’ ಎಂದು ಕರೆಯಿಸಿಕೊಳ್ಳುವ ರೇಷ್ಮೆ ಕೃಷಿ ಅಂದರೆ ಪಂಚಪ್ರಾಣ. ಅದರ ಅಷ್ಟೇ, ಪ್ರಿಯವಾದದ್ದು. 2015 ರಲ್ಲಿ 3-20 ಎಕರೆ ರೇಷ್ಮೆ ಕೃಷಿಗೆ ಮುಂದಾದ ಕುಟುಂಬವನ್ನು ರೇಷ್ಮೆ ಎಳೆ ಮಾತ್ರ ಗಟ್ಟಿಯಾಗಿ ಕೈ ಹಿಡಿದಿದೆ. ಈ ಸದ್ಯ 7 ಎಕರೆ ತನಕವೂ ಬೆಳೆಯನ್ನು ಕುಟುಂಬವು ವೃದ್ಧಿಸಿಕೊಂಡಿದೆ.
ಬೇಸಾಯ ಕ್ರಮ : ಮಣ್ಣು ಪರೀಕ್ಷೆ ಮೂಲಕ ರೇಷ್ಮೆ ಬೇಸಾಯಕ್ಕೆ ಮುಂದಾದ ಕುಟುಂಬವು ಎಲ್ಲ ರೀತಿಯಲ್ಲಿ ಜಮೀನು ಹದಗೊಳಿಸಿ, 3-20 ಎಕರೆ ಜಮೀನಿನಲ್ಲಿ ಸಾಲಿನಿಂದ ಸಾಲಿಗೆ 4×4 ಅಡಿಯಲ್ಲಿ ಹಿಪ್ಪು ನೇರಳೆ ಕಡ್ಡಿ ನಾಟಿಗೆ ಮೊದಲು ಮುಂದಾಗಿದೆ. ಬಳಿಕ 2019 ರಲ್ಲಿ ಆಧುನಿಕ ಪದ್ಧತಿಗೆ ಮಾರು ಹೋಗಿ ಜೋಡಿ ಸಾಲು ಪದ್ಧತಿಯಲ್ಲಿ 8 ಅಡಿಗಳ ಅಂತರದ ಸಾಲಿನಿಂದ ಸಾಲಿಗೆ ಹಾಗೂ 3 ಅಡಿಗಳ ಜೋಡಿ ಸಾಲಿನಲ್ಲಿ ಫಲವತ್ತಾದ ಹಿಪ್ಪು ನೇರಳೆ ಬೆಳೆಯನ್ನು ಬೆಳೆಯುವಲ್ಲಿ ಕುಟುಂಬವು ಯಶಸ್ವಿಯಾಗಿದೆ. ಹನಿ ನೀರಾವರಿ ಮೂಲಕ ಕಸ ನಿಯಂತ್ರಣಕ್ಕೆ ಮುಂದಾಗಿರುವುದು ಇವರ ಕೃಷಿಯ ವಿಭಿನ್ನತೆ. ಬೆಳೆಯ ಫಲವತ್ತತೆಗಾಗಿ ಕುರಿ ಗೊಬ್ಬರ ಮೊರೆ ಹೋಗಿದ್ದಾರೆ. ಎರಡು ಸಾಕಾಣಿಕೆ ಕೇಂದ್ರಗಳಲ್ಲಿ ರೇಷ್ಮೆ ಹುಳುಗಳ ಬೆಳವಣಿಗೆಗೆ ಮುಂದಾಗುವ ಕುಟುಂಬವು 520 ಲಿಂಕ್ಸ್ ಗಳ ಖರೀದಿ ಸೇರಿದಂತೆ ಗೊಬ್ಬರ, ಕೂಲಿ ಕರ್ಚು 30 ಸಾವಿರ ರೂಪಾಯಿಗಳನ್ನು ತೆಗೆದರೆ ಮಿಕ್ಕೆಲ್ಲ ನಿವ್ವಳ ಆದಾಯ ಎನ್ನುತ್ತಾರೆ ಕುಟುಂಬಸ್ಥರು.
ಪ್ರಥಮ ಸ್ಥಾನ : ಕೇವಲ 25 ದಿನಗಳ ಕೃಷಿಗೆ ಮಾರು ಹೋದ ಕುಟುಂಬವು 2022 ನೇ ಸಾಲಿನ ಶ್ರೇಷ್ಠ ರೇಷ್ಮೆ ಬೆಳೆಗಾರ ಕುಟುಂಬ ಎನಿಸಿಕೊಂಡು, ತಾಲೂಕಿಗೆ ಪ್ರಥಮ ಸ್ಥಾನವಾದರೇ, ಜಿಲ್ಲೆಗೆ ದ್ವೀತಿಯ ಸ್ಥಾನ ಪಡೆದು, ಹೆಮ್ಮೆ ಬೀರುತ್ತಿದೆ.
ದರ ಹಾಗೂ ಮಾರುಕಟ್ಟೆ : ಕೊರೋನಾ ಸಮಯದಲ್ಲಿ ರೇಷ್ಮೆ ಬೆಲೆಯಲ್ಲಿ ಸಾಕಷ್ಟು ಇಳಿಕೆ ಕಂಡ ಕುಟುಂಬಕ್ಕೆ ಸರಕಾರದ 50 ರೂಪಾಯಿಗಳ ಬೆಂಬಲ ಬೆಲೆ ಕುಟುಂಬವನ್ನು ಕೈಹಿಡಿದಿದೆ. ಆರಂಭದಲ್ಲಿ 350 ರಿಂದ 400 ರೂಪಾಯಿಗಳ ದರದಲ್ಲಿ ರಾಮನಗರ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡುಗಳನ್ನು ಮಾರಾಟ ಮಾಡಿದ ಕುಟುಂಬಕ್ಕೆ 2022 ರಲ್ಲಿ 410 ಕೆ.ಜಿ ಇಳುವರಿ ಪಡೆಯುವ ಮೂಲಕ 901 ರೂಪಾಯಿಗಳವರೆಗೆ ದರ ಪಡೆದು, 4,10,000=00 ರೂಪಾಯಿಗಳ ಆದಾಯ ಪಡೆಯುವಲ್ಲಿ ಕುಟುಂಬವು ಯಶಕಂಡಿದೆ.
ಶರಣಪ್ಪ ಬಂಡಿ ಅವರ ಜೇಷ್ಠ ಸುಪುತ್ರ ಪದವಿಧರ ಭೀಮಪ್ಪ ಬಂಡಿ ಅವರಿಗೆ ರೇಷ್ಮೆ ಕೃಷಿಯಲ್ಲಿ ವಿಶೇಷ ಆಸಕ್ತಿ. ಬಹುತೇಕ ಜವಾಬ್ದಾರಿ ಹೊತ್ತು ರೇಷ್ಮೆ ಹುಳುಗಳ ಪೋಷಣೆ ಮೂಲಕ ಹೆಚ್ಚು ಸಾಧನೆಗೈಯಲು ಯುವಕ ಕಾರಣರಾಗಿದ್ದಾರೆ. ರೇಷ್ಮೆ ಹುಳುಗಳ ನಾಡಿ ಮಿಡಿತ ಅರಿತ ಕುಟುಂಬ ಹವಾಮಾನಕ್ಕೆ ತಕ್ಕಂತೆ ತಮ್ಮ ಮಕ್ಕಳಿಗಿಂತಲೂ ಹೆಚ್ಚು ರೇಷ್ಮೆ ಹುಳುಗಳ ಜೀವನ ಚಕ್ರವನ್ನು ಅರಿತಿರುವುದಂತು ಸತ್ಯ. ರೇಷ್ಮೆ ಸಾಕಾಣಿಕೆಯೇ ತಮ್ಮ ಜೀವನದ ಒಂದು ಭಾಗವಾಗಿಸಿಕೊಂಡಿರುವ ‘ಬಂಡಿ’ ಕುಟುಂಬಕ್ಕೆ ನಮ್ಮದೊಂದು ಸಲಾಂ..!!