ಶರಣಪ್ಪ ಕುಂಬಾರ /
ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕಲಾ ಜಗತ್ತಿಗೆ ಅತ್ಯದ್ಭುತ ಕಲೆವೊಂದನ್ನು ಪರಿಚಯಿಸಲು ಹೊರಟಿರುವ ಉದಯೋನ್ಮುಖ ಯುವ ಕಲೆಗಾರನ ಕುರಿತಾಗಿರುವ ವಿಭಿನ್ನ ಹಾಗೂ ವಿಶಿಷ್ಟ ಪರಿಚಯ ಲೇಖನವಿದು..!
‘ಫೈರೋಗ್ರಫಿ’ ಎಂಬುದೇ ವಿಶಿಷ್ಟ ಕಲೆ. ಇಂತಹ ವಿಶಿಷ್ಟ ಹಾಗೂ ವಿಭಿನ್ನ ಕಲೆಯ ಮುಖ್ಯ ಸಾಧನವೇ..’ಸಾಡರಗನ್’. ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಒಂದನ್ನೊಂದು ಬೆಸೆಯುವುದಕ್ಕೆ ಉಪಯೋಗಿಸುವ ಸಾಡರಗನನ್ನು ಕುಂಚವಾಗಿಸಿಕೊಂಡು ಅತ್ಯದ್ಭುತ ಚಿತ್ರಗಳಿಗೆ ಜೀವ ತುಂಬುವ ಉದಯೋನ್ಮುಖ ಕಲಾವಿದನೇ ಕುಷ್ಟಗಿಯ ಕಿರಣ ಚಿರಂಜೀವಿ. ಕಲಾವಿದ ಕುಷ್ಟಗಿ ಪುರಸಭೆ ಪ್ರಥಮ ದರ್ಜೆ ಸಹಾಯಕ ಚಿರಂಜೀವಿ ದೊಡ್ಡಮನಿಯವರ ಜೇಷ್ಠ ಸುಪುತ್ರ ಎಂಬುದು ವಿಶೇಷ.
ವಿಭಿನ್ನ ಕಲೆ : ‘ಫೈರೋಗ್ರಫಿ ಕಲೆ’ ಎಂಬುವುದು ತರಹವೇ ಹಾರಿ ಬಣ್ಣದ ಮೂಲಕ ಕುಂಚ, ಪೆನ್ನು, ಪೆನ್ಸಿಲ್ ಇತ್ಯಾದಿಗಳ ಸಹಾಯದಿಂದ ಹಾಳೆಗಳಲ್ಲಿ ಸೇರಿದಂತೆ ಇತ್ಯಾದಿ ವಸ್ತುಗಳಲ್ಲಿ ಬಿಡಿಸುವಂತ ಕಲೆ ಅಂತು ಅಲ್ಲವೇ ಅಲ್ಲ. ಕೆಂಡದಂತೆ ಕಾಯ್ದ ಸಾಡರಗನನ್ನು ವಿವಿಧ ಪ್ರಭೇದಗಳ ಕಟ್ಟಿಗೆಯ ಹಲಗೆಗಳ ಮೇಲೆ ನಯವಾಗಿ ಸುಟ್ಟು ಬೆಳಕಿನ ಜೊತೆ ಜೊತೆಗೆ ನೆರಳು ಆಕಾರ ನೀಡಿ, ಚಿತ್ರಗಳಿಗೆ ರೂಪ ನೀಡುವ ಮೂಲಕ ಜೀವ ತುಂಬುವುದೇ ಫೈರೋಗ್ರಫಿ ಎನ್ನುತ್ತಾರೆ ಕಲೆಗಾರ ಕಿರಣ ಚಿರಂಜೀವಿ. ವಿಶೇಷವಾಗಿ ಸಾಗವಾನಿ (ಟೀಕ್ ವುಡ್), ಬೆಳ್ಳಿ ಮರ (ಶೀಲ್ವರ್ ವುಡ್), ಫೈನ್ ವುಡ್ ಗಳ ಮೇಲೆ ಚಿತ್ರ ಬಿಡಿಸುವುದನ್ನು ಕಿರಣ ಕರಗತಮಾಡಿಕೊಂಡಿದ್ದಾರೆ. ಮೂಲತಃ ಕುಷ್ಟಗಿಯವರಾದ ಕಿರಣ ಚಿರಂಜೀವಿ ಸ್ಥಳೀಯ ಪುರಸಭೆ ಸಿಬ್ಬಂದಿ ಚಿರಂಜೀವಿ ದೊಡ್ಡಮನಿ ಅವರ ಪುತ್ರ ಎಂಬುದು ವಿಶೇಷ. ವಿದ್ಯಾರ್ಥಿ ಜೀವನದಲ್ಲಿಯೇ ಕಲೆ ಅಂದರೆ ಕಿರಣ ಅವರಿಗೆ ಪಂಚಪ್ರಾಣ. ಎಲ್ಲರಿಗಿಂತಲೂ ವಿಭಿನ್ನವಾಗಿರಬೇಕು. ತನ್ನದೇ ವಿಶಿಷ್ಟ ಕಲೆ ಇರಬೇಕು ಎಂಬುದು ಇವರ ಮೂಲ ಆಶಯವಾಗಿತ್ತು. ಅದಕ್ಕೆ ತಕ್ಕಂತೆ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಡಿಸೈನ್ ಫೀಲ್ಡ್ ನಲ್ಲಿಯೇ ಪದವಿ ಪಡೆದ ಇವರು, ವಿಶೇಷ ಆಸಕ್ತಿಯಿಂದ ಶಿಲ್ಪ ಕಲೆಯಲ್ಲಿ ಸ್ನಾತಕೋತ್ತರ ಪದವಿ ಕೂಡಾ ಗಿಟ್ಟಿಸಿಕೊಂಡಿದ್ದಾರೆ.
ತಮ್ಮ ವಿನೂತನ ಕಲೆಯಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ, 24 ನೇ ತೀರ್ಥಂಕರ ಭಗವಾನ್ ಮಹಾವೀರ, ಸ್ಥಳೀಯ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು, ಈಶಾ ಫೌಂಡೇಶನ್ ನ ಸದ್ಗುರುಗಳ ಭಾವಚಿತ್ರ, ಕುಷ್ಟಗಿಯ ಅಮ್ಮ ಹೋಮ್ ನೀಡ್ಸ್ ನ ಶರಣಪ್ಪ ಹಂಪನಾಳ ಇವರುಗಳ ಚಿತ್ರಗಳು ನೋಡಲಿಕ್ಕೆ ಆಕರ್ಷಕವಾಗಿವೆ.
ಬೇಡಿಕೆ : ಶಾಶ್ವತವಾಗಿ ತೆಗೆದಿಡಬಹುದಾದ ಈ ಫೈರೋಗ್ರಫಿ ಕಲಾ ಆಕೃತಿಗಳಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಬಹಳಷ್ಟು ತಾಳ್ಮೆ ಇದ್ದವರಿಗೆ ಮಾತ್ರ ಈ ವಿಶಿಷ್ಟ ಕಲೆ ಕರಗತವಾಗುತ್ತದೆ. ಇಂತಹ ವಿಶಿಷ್ಟತೆ ಹೊಂದಿರುವ ಕಲೆಯನ್ನು ಆಯ್ದುಕೊಳ್ಳುವುದು ಸಾಕಷ್ಟು ವಿರಳ. ಆಸಕ್ತರು ಗಿಫ್ಟ್ ನೀಡುವುದು ಸೇರಿದಂತೆ ಕಲೆ ಮೆಚ್ಚಿಕೊಂಡು, ಆಸಕ್ತಿಯಿಂದ ವಿವಿಧ ಚಿತ್ರಗಳಿಗೆ ಬೇಡಿಕೆ ಇಡುವ ಜನರಿದ್ದಾರೆ ಎನ್ನುತ್ತಾರೆ ಕಿರಣ. ವಿಭಿನ್ನ ಹಾಗೂ ವಿಶಿಷ್ಟ ಕಲಾ ಪ್ರಿಯ ‘ಕಿರಣ ಚಿರಂಜೀವಿ’ ಫೈರೋಗ್ರಫಿಯನ್ನು ಕೇವಲ ಹವ್ಯಾಸವಾಗಿಸಿಕೊಂಡಿದ್ದಾರೆ. ಕಲೆಯ ಜೊತೆಗೆ ಐಎಎಸ್ ಕನಸ ಹೊಂದಿರುವ ಇವರು ಪರೀಕ್ಷಾ ತಯಾರಿಯಲ್ಲಿದ್ದಾರೆ. ಇವರ ಕಲೆ ಉನ್ನತ ಮಟ್ಟ ತಲುಪಲಿ ಜೊತೆಗೆ ಇವರು ಕಂಡ ಕನಸು ನನಸಾಗಲಿ ಎಂಬುದು ‘ಕೃಷಿ ಪ್ರಿಯ’ ಪತ್ರಿಕೆಯ ಆಶಯ..!!