ಏಪ್ರಿಲ್ 23 ರಿಂದ ಕುಷ್ಟಗಿಯಲ್ಲಿ ಆಧ್ಯಾತ್ಮಿಕ ಪ್ರವಚನ

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಜಿಲ್ಲೆಯ ಕುಷ್ಟಗಿ ಪಟ್ಟಣದ ಬಸವ ಭವನದಲ್ಲಿ ಬಾಗಲಕೋಟೆ ಜಿಲ್ಲೆ ಶಿರೂರು ಶ್ರೀ ಮಹಾಂತತೀರ್ಥ ಡಾ.ಬಸವಲಿಂಗ ಶ್ರೀಗಳು ದಿನಾಂಕ 23-04-2022 ರಿಂದ 03-5-2022 ರ ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ’ಬಸವ ಶರಣ ಚಿಂತನೆ’ಯ ಆಧ್ಯಾತ್ಮಿಕ ಪ್ರವಚನ ನೀಡುವರು ಎಂದು ಬಸವ ಸಮಿತಿ ತಾಲೂಕಾಧ್ಯಕ್ಷ ಶಂಕರಗೌಡ ಪಾಟೀಲ್ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದ್ದಿಷ್ಟು, ಕಳೆದೆರಡು ವರ್ಷಗಳಿಂದ ಮಹಾಮಾರಿ ಕೊರೋನಾ ಭೀತಿ ಹಿನ್ನೆಲೆ ಸರ್ಕಾರ ನಿಯಮಗಳನ್ನು ಜಾರಿಗೆ ತಂದು, ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಿತ್ತು. ಹಾಗಾಗಿ ಎರಡು ವರ್ಷ ಬಸವ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಿತ್ತು. ಆದರೆ, ಪ್ರವಚನ ಕಾರ್ಯಕ್ರಮ ನಡೆಸಿರಲಿಲ್ಲ. ಪ್ರಸಕ್ತ ವರ್ಷ ಬಸವ ಸಮಿತಿ ಹಿರಿಯರು ಈ ಕುರಿತು ಚರ್ಚೆ ನಡೆಸಿ ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಅನುಭಾವಿ ಶರಣ ಚಿಂತಕರಾದ ಬಾಗಲಕೋಟೆ ಜಿಲ್ಲೆ ಶಿರೂರು ಶ್ರೀ ಮಹಾಂತತೀರ್ಥ ಡಾ.ಬಸವಲಿಂಗ ಶ್ರೀಗಳವರಿಂದ ಈ ಬಾರಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಷ್ಟಗಿ ಮದ್ದಾನಿ ಹಿರೇಮಠದ ಪೀಠಾಧಿಪತಿ ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಪುರಸಭೆ ಅಧ್ಯಕ್ಷ ಗಂಗಾಧರಯ್ಯ ಕೆ.ಹಿರೇಮಠ, ಮಾಜಿ ಶಾಸಕರಾದ ಕೆ.ಶರಣಪ್ಪ ವಕೀಲರು, ದೊಡ್ಡನಗೌಡ ಪಾಟೀಲ್ ಸೇರಿದಂತೆ ಬಸವ ಸಮಿತಿ ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿರುವರು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪ್ರವಚನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಸವ ಸಮಿತಿ ಕಾರ್ಯದರ್ಶಿ ಮಹೇಶ ಜಿ.ಹೆಚ್. ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.