ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಗಾಳಿ ಮಳೆಗೆ ಜಿಲ್ಲೆಯ ಬಹುತೇಕ ಮಾವಿನ ಫಸಲು ನೆಲಕ್ಕೆರುಳಿದೆ. ಇನ್ನೇನು ಕೈ ಬಂದಿದ್ದ ಮಾವು ಅಬ್ಬರಿಸಿದ ಮಳೆಯ ಜೊತೆಗೆ ಬೀಸಿದ ವಿಪರೀತ ಗಾಳಿಗೆ ನೂರಾರು ಹೆಕ್ಟೇರ್ ಮಾವು ಬೆಳೆ ಹಾಳಾಗಿ ಹೋಗಿದೆ..!
ಇಲ್ಲಿಯವರೆಗೂ ಸುರಿದ ಎಲ್ಲಾ ಮಳೆಗಳು ಕೂಡಾ ವಿಪರಿತ ಬಿರು ಗಾಳಿವೊಂದಿಗೆ ಆರಂಭಗೊಂಡ ಹಿನ್ನಲೆಯಲ್ಲಿ ಇನ್ನೇನು ಕಟಾವಿಗೆ ಬಂದಿದ್ದ ಮಾವು ಇತ್ತ ಹಣ್ಣು ಆಗದೆ ಕಸಗಾಯಿಯಾಗಿ ಮಣ್ಣು ಪಾಲಾಗಿವೆ. ಇದರ ಜೊತೆಗೆ ವಿಪರಿತ ತಾಪಮಾನದ ವೈಪರೀತ್ಯಗಳು ಕೂಡಾ ಮಾವು ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ದಿನಾಂಕ 28-04-2022 ರಂದು ಸಾಯಂಕಾಲ ಆರಂಭವಾದ ಅಡ್ಡಾತಿಡ್ಡಿ ಗಾಳಿ ಮಳೆಗೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಿ.ಕಲಕೇರಿ ಗ್ರಾಮದ ಸೀಮಾದಲ್ಲಿನ ಕುಷ್ಟಗಿ ನಿವಾಸಿ ಬಸನಗೌಡ ಪೊಲೀಸ್ ಪಾಟೀಲ್ ಅವರಿಗೆ ಸೇರಿದ 5 ಎಕರೆ ಮಾವು ಸಂಪೂರ್ಣ ಹಾಳಾಗಿ ಹೋಗಿದೆ. ಬೆಳೆಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದ ಬಸನಗೌಡರಿಗೆ ಈ ವರ್ಷ ಮಾಡಿದ ಕರ್ಚು ಕೂಡಾ ಬಾರದಂತಾಗಿದೆ. ಈ ವರ್ಷ ಮೊದಲೇ ಕಾಪು ಪ್ರಮಾಣ ಕಡಿಮೆ ಇರುವಾಗ ಅಕಾಲಿಕ ಮಳೆ ಸೇರಿದಂತೆ ‘ಗಾಳಿಮಳೆ’ ಬಲಿ ಪಡೆದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳ ಆದಾಯ ನಿರೀಕ್ಷೆಯಲ್ಲಿ ಬಸನಗೌಡರು ಬೆಳೆಗೆ ಮಾಡಿದ ಕರ್ಚು ಕೂಡಾ ಮೈಮೇಲೆ ಬಿದ್ದಿರುವುದು ಸ್ಪಷ್ಟವಾಗಿದೆ. ಹಾನಿಗೊಳಗಾದ ಜಿಲ್ಲೆಯ ಎಲ್ಲಾ ಮಾವು ಬೆಳೆಗಾರರಿಗೆ ಸೂಕ್ತ ಪರಿಹಾರಕ್ಕಾಗಿ ಸರಕಾರಕ್ಕೆ ಒತ್ತಾಯಪಡಿಸಿದ್ದಾರೆ.
ಕುರಿ ಬಲಿ : ಮಾವು ಹಾನಿ ಜೊತೆಗೆ ಶೆಡ್ ನಲ್ಲಿದ್ದ 8 ಕುರಿಗಳು ಇಲ್ಲಿಯವರೆಗೆ ಬಲಿಯಾಗಿವೆ. ಸೂಕ್ತ ಚಿಕಿತ್ಸೆಗಾಗಿ ಇಲ್ಲದ ಪಶು ವೈದ್ಯರು, ಕುರಿ ಬಲಿಗಳ ಪರಿಹಾರಕ್ಕಾಗಿ ಎಲ್ಲಿಂದ ಲಭ್ಯವಾಗಲು ಸಾಧ್ಯವೆಂದು ಈ ಭಾಗದ ರೈತರು ನೊಂದು ಮಾತನಾಡುತ್ತಿದ್ದಾರೆ. ಕುರಿ ಸಾಕಾಣಿಕೆದಾರರಿಗೆ ಕುರಿಗಳ ಹಾನಿ ಪರಿಹಾರದ ಜೊತೆಗೆ ಸೂಕ್ತ ಚಿಕಿತ್ಸೆಗೆ ಪಶು ವೈದ್ಯರು ಮುಂದಾಗಬೇಕಾಗಿರುವುದು ಅವಶ್ಯವಿದೆ ಎಂದು ಬಸನಗೌಡ ಪೊಲೀಸ್ ಪಾಟೀಲ ಅಭಿಪ್ರಾಯವ್ಯಕ್ತಪಡಿಸಿದರು.