ವಸತಿ ಮನೆಗಳ ಪರಿಶೀಲನೆಗೆ ಜಿಲ್ಲಾ ನೋಡಲ್ ಅಧಿಕಾರಿಗಳು ಭೇಟಿ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಪ್ರಧಾನ ಮಂತ್ರಿ ಅವಾಸ್ ಯೋಜನೆ – ಅಂಬೇಡ್ಕರ್ ಹಾಗೂ ಬಸವ ಗ್ರಾಮೀಣ ವಸತಿ ಯೋಜನೆಯಡಿ ಆಯ್ಕೆಯಾದ ಅರ್ಹ ಫಲಾನುಭವಿಗಳ ಮನೆಗಳ ಪರಿಶೀಲನೆಗೆ ದಿನಾಂಕ 30-04-2022 ರಂದು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಜಿಲ್ಲೆಯ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕ್ಯಾದಿಗುಪ್ಪಾ ಗ್ರಾಮ ಪಂಚಾಯಿತಿಗೆ ಪ್ರಸಕ್ತ ವರ್ಷ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ 500 ಮನೆಗಳು ಮಂಜೂರಾಗಿದ್ದು, ಮೊದಲನೆ ಹಂತದಲ್ಲಿ 40 ಮನೆಗಳನ್ನು ನೀಡಲಾಗಿದೆ. ಅರ್ಹ ಬಡ ಫಲಾನುಭವಿಗಳನ್ನು ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಆಡಳಿತ ಮಂಡಳಿ ಸರ್ವ ಸದಸ್ಯರ ಹಾಗೂ ಗ್ರಾಮಸ್ಥರ ಸಮ್ಮುಖದ ಜರುಗಿದ ಗ್ರಾಮ ಮತ್ತು ವಾರ್ಡ ಸಭೆಯಲ್ಲಿ ಆಯ್ಕೆ ಮಾಡಲಾಗಿತ್ತು. ಆಯ್ಕೆಯಾದ ಮನೆಗಳನ್ನು ಜಿಪಿಎಸ್ ಕೂಡಾ ಮಾಡಲಾಗಿತ್ತು. ಆಯ್ಕೆಯಾದ ಅರ್ಹ ಫಲಾನುಭವಿಗಳ ಮನೆಗಳಿಗೆ ಖುದ್ದು ಭೇಟಿ ನೀಡಿದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳಾದ ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಅಮೀನ್  ಹಾಗೂ ಕುಷ್ಟಗಿ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಶ್ರೀಶೈಲ್ ಪೊಲೀಶಿ ಇವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವಸತಿ ಯೋಜನೆಯ ಸೌಲಭ್ಯ ಪಡೆಯಲು ಅರ್ಹ ಬಡ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದು ಉತ್ತಮ ಕಾರ್ಯವಾಗಿದೆ ಎಂದು ಆಡಳಿತ ಮಂಡಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಪಿಡಿಒ ಪಂಪಣ್ಣ ಗಂಗನಾಳ, ಗ್ರಾಪಂ ಅಧ್ಯಕ್ಷೆ ರೇಣುಕಾ ಸಂಗಪ್ಪ ವಾಲಿಕಾರ, ಕಂಪ್ಯೂಟರ್ ಆಪರೇಟರ್ ಜಾಫರ್ ಹುಸೇನ್ ಸೇರಿದಂತೆ ಸರ್ವ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.