ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಪಿಎಸ್ ಐ ನೇಮಕಾತಿಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳ ಕರ್ಮ ಕಾಂಡ ಬಯಲಾಗುತ್ತಿರುವ ಮಧ್ಯದಲ್ಲಿಯೇ ಸರಕಾರ ರಾಜ್ಯದ 6 ಜನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಪಟ್ಟ ಕಟ್ಟಲು ಮುಂದಾಗಿದೆ..!?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಎರವಲು ಸೇವೆಗೆ ಇತಿ ಶ್ರೀ ಹಾಡಲು ಮುಂದಾಗಿದ್ದರು. ಅಲ್ಲದೆ, ವಿವಿಧ ಇಲಾಖೆಗಳಲ್ಲಿ ಎರವಲು ಸೇವೆ ಸಲ್ಲಿಸುತ್ತಿರುವ ನೌಕರರನ್ನು ಮಾತೃ ಇಲಾಖೆಗಳಿಗೆ ಕರೆತರುವ ನಿರ್ಧಾರಕ್ಕೆ ಬಂದಿದ್ದರು. ಸಿಎಂ ಈ ನಿರ್ಧಾರದಿಂದ ಪ್ರಮುಖವಾಗಿ ಶಿಕ್ಷಣ ಇಲಾಖೆ ನೌಕರರ ಮೇಲೆ ಸಾಕಷ್ಟು ವ್ಯತಿರಿಕ್ತವಾದ ಪರಿಣಾಮ ಕೂಡಾ ಬೀರಿತ್ತು. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಸರಕಾರ ರಾಜ್ಯದ ಆರು ಜನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ 6 ಹುದ್ದೆಗಳಿಗೆ ನಿಯೋಜನೆಗೆ ಹೊರಡಿಸಿದ ಆದೇಶ ಹೊರಬಿದ್ದಿರುವುದು ಕ್ರೀಡಾ ಇಲಾಖೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕೊರೋನಾ ಹಾವಳಿ ಸೇರಿದಂತೆ ನಾನಾ ಕಾರಣಾಂತರಗಳಿಂದ ಖರ್ಚಾಗದೆ ಹಾಗೇಯೇ ಉಳಿದುಕೊಂಡಿರುವ ಅನುದಾನ ಬಳಕೆಗೆ ರಾಜ್ಯ ಸರಕಾರ ಕೈಗೊಂಡಿರುವ ಹುನ್ನಾರ ಇದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸರಕಾರದ ಅವಧಿಯ ಕೊನೆಯ ವರ್ಷದಲ್ಲಿ ತಮ್ಮ ಆಪ್ತ ವಲಯದ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಳ ನಿಯೋಜನೆಗೆ ಹಾಕಿಕೊಂಡಿರುವ ಪ್ಲಾನ್ ಇದಾಗಿರಬಹುದು ಎಂಬ ಮಾತುಗಳನ್ನು ಕೂಡಾ ಅಲ್ಲಗಳಿಯುವಂತಿಲ್ಲ..!!