ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಅಲೆಮಾರಿ ಜನಾಂಗ ಒಂದೆಡೆ ನೆಲೆಯೂರಲು ಸರ್ಕಾರ ಉಚಿತ ನಿವೇಶನ, ಮನೆ, ಶಾಲೆ-ಅಂಗನವಾಡಿ ಕಟ್ಟಡ ನಿರ್ಮಿಸಿ ಮೂಲಭೂತ ಸೌಲಭ್ಯ ಕಲ್ಪಿಸುತ್ತಿದೆ. ಆದರೆ, ಅದೇ ಸರ್ಕಾರ ಅಲೆಮಾರಿ ಜನಾಂಗಕ್ಕೆ ನೀಡಿದ ಮನೆ ಶಾಲಾ ಕಟ್ಟಡ ತೆರವುಗೊಳಿಸಲು ಮುಂದಾಗಿದ್ದು, ಇದರಿಂದ ಬುಡಕಟ್ಟು ಜನಾಂಗ ಶಿಕ್ಷಣ, ಸೂರು ಇಲ್ಲದೇ ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ..!
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ಕಳೆದ ಹದಿನೈದು ವರ್ಷಗಳಿಂದ ಅಲೆಮಾರಿ ಬುಡಕಟ್ಟು ಜನಾಂಗದ ನೂರು ಕುಟುಂಬಗಳು ವಾಸಿಸುತ್ತಿರುವ ಶರೀಫ್ ನಗರದಲ್ಲಿನ ದುಸ್ಥಿತಿ ಇದು, ಈ ಶರೀಫ್ ನಗರದಲ್ಲಿ ಗದಗ-ವಾಡಿ ರೈಲು ಮಾರ್ಗ ಹಾದು ಹೋಗುತ್ತಿರುವ ಹಿನ್ನಲೆಯಲ್ಲಿ ಅಲ್ಲಿಯ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕಟ್ಟಡ ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಮನೆಗಳು ತೆರವುಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಮನೆ ಕಳೆದುಕೊಂಡ ಕುಟುಂಬಗಳಿಗೆ ಇಲಾಖೆ ಪರಿಹಾರ ಮೊತ್ತ ಸಹ ನೀಡಿದೆ. ಜತೆಗೆ ಶಾಲಾ ಕಟ್ಟಡಕ್ಕೆ 12 ಲಕ್ಷ ರೂಪಾಯಿಗಳನ್ನು ತೆಗೆದಿರಿಸಿದೆ. ಆದರೆ, ಪರಿಹಾರಾರ್ಥವಾಗಿ ಬೇರೆಡೆ ಭೂಮಿ ಒದಗಿಸಿಲ್ಲ. ಮನೆ ಕಳೆದುಕೊಂಡ ಮೂವತ್ತು ಕುಟುಂಬಗಳು ನೆಲೆಯಿಲ್ಲದೇ ಅತಂತ್ರ ಸ್ಥಿತಿಯಲ್ಲಿವೆ.
ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2021-22ನೇ ಸಾಲಿನಲ್ಲಿ ದಾಖಲಾದ ಒಟ್ಟು 73 ಮಕ್ಕಳಲ್ಲಿ 42 ಹೆಣ್ಣು ಮಕ್ಕಳು, 31 ಗಂಡು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ 120 ಚಿಕ್ಕ ಮಕ್ಕಳು ತೆರಳುತಿದ್ದಾರೆ. ಇಲ್ಲಿನ ಶಾಲೆಯನ್ನು ಮಾರುತಿ ನಗರ ಹಾಗೂ ಕೃಷ್ಣಗಿರಿ ಕಾಲೋನಿಯಲ್ಲಿ ಇರುವ ಶಾಲೆಗಳಿಗೆ ವಿಲಿನಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದನ್ನು ವಿರೋಧಿಸುತ್ತಿರುವ ನಿವಾಸಿಗಳು, ದೂರ ಕ್ರಮಿಸಿ ಬೇರೆಡೆ ಇರುವ ಶಾಲೆಗಳಿಗೆ ತೆರಳಲು ಮಕ್ಕಳು ಹಿಂದೇಟು ಹಾಕುತ್ತಾರೆ. ಮತ್ತೆ ಚಿಂದಿ ಆಯಲು, ಭಿಕ್ಷಾಟನೆ ಮಾಡಲು ಮಕ್ಕಳು ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಶರೀಫ್ ನಗರದ ಹತ್ತಿರವೇ ಇರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸೇರಿದ ಪ್ರದೇಶದಲ್ಲಿ ಸರ್ಕಾರಕ್ಕೆ ಸೇರಿದ 2 ಎಕರೆ 11 ಗುಂಟೆ ಹಾಗೂ 25 ಗುಂಟೆ ಇರುವ ಎರಡು ಜಾಗೆಯಿದ್ದು, ಮನೆ ನಿರ್ಮಾಣಕ್ಕೆ ಕುಟುಂಬಗಳಿಗೆ ಜಾಗೆ ನೀಡದಿದ್ದರೂ ಸರಿ. ಆದರೆ, ಮಕ್ಕಳ ಶಿಕ್ಷಣಕ್ಕಾದರೂ ಶಾಲಾ ಕಟ್ಟಡ ನಿರ್ಮಿಸಿ ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಇಲ್ಲಿ ವಾಸಿಸುವ ಕಾಡಸಿದ್ದರು, ದಾಸರು, ಹಾವಾಡಿಗರು ಸೇರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತದೆ ಎಂದು ಅಲೆಮಾರಿ ಬುಡಕಟ್ಟು ಸಮಾಜ ಸಂಘದ ಅಧ್ಯಕ್ಷ ಮಹಬೂಬಸಾಬ ಮದಾರಿ (ಹಾವಾಡಿಗ) ಹಾಗೂ ಗೌರವಾಧ್ಯಕ್ಷ ಮೋಹನಲಾಲ್ ತಲೇಡಾ ಜೈನ್ ಮತ್ತು ಅಲೆಮಾರಿ ಕುಟುಂಬಗಳು ಎಚ್ಚರಿಕೆ ನೀಡಿದ್ದಾರೆ..!!