ಡಿಡಿಪಿಐಯಾಗಿ ಮುತ್ತುರಡ್ಡಿ ರಡ್ಡೇರ ಅಧಿಕಾರ ಸ್ವೀಕಾರ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಡಿಡಿಪಿಐಯಾಗಿ ಅಧಿಕಾರ ಸ್ವೀಕರಿಸಿದ ಮುತ್ತುರಡ್ಡಿ ರಡ್ಡೇರ ಅವರು ಕೊಪ್ಪಳ ಜಿಲ್ಲೆಯವರು ಎಂಬುದು ಹೆಮ್ಮೆ ಸಂಗತಿ..!

ಮೂಲತಃ ಕೊಪ್ಪಳ ಜಿಲ್ಲೆಯವರು : ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ನೇಮಕವಾದ ಮುತ್ತುರೆಡ್ಡಿ ಅಮರಡ್ಡಿ ರಡ್ಡೇರ ಅವರು ಮೂಲತಃ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಡಲಗೇರಿ ಗ್ರಾಮದವರು ಎಂಬುದು ವಿಶೇಷ.

ಶಾಡಲಗೇರಿ ಗ್ರಾಮ ಇವರ ಜನ್ಮ ಸ್ಥಳ. ತಂದೆ ಅಮರಡ್ಡಿ ತಾಯಿ ಬಸಮ್ಮ ರಡ್ಡೇರ ಪಕ್ಕಾ ಕೃಷಿಕರು. ಕೃಷಿಯೇ ಮನೆತನದ ಮೂಲ ವೃತ್ತಿ. ಬಾಲ್ಯದಲ್ಲೇ ಬಹಳಷ್ಟು ಕ್ರಿಯಾಶೀಲರಾಗಿದ್ದರು ಎಂಬುದು ಅವರ ಒಡನಾಡಿಗಳ ಅಭಿಪ್ರಾಯ. ಮನೆಗೆ ಮೊದಲ ಮಗನಾಗಿರುವ ಮುತ್ತುರಡ್ಡಿ ತಮ್ಮ ಬಾಲ್ಯದ ಜೊತೆಗೆ ಒಂದನೇ ತರಗತಿಯಿಂದ ನಾಲ್ಕನೇ ತರಗತಿವರೆಗೆ ಸ್ವ ಗ್ರಾಮ ಶಾಡಲಗೇರಿಯಲ್ಲಿಯೇ ಶಿಕ್ಷಣ ಆರಂಭಿಸಿದರು. 5 ನೇ ತರಗತಿಯಿಂದ 7 ನೇ ತರಗತಿವರೆಗೆ ಪಕ್ಕದ ಹನುಮನಾಳದಲ್ಲಿ ಕಲಿತ ಇವರು, ಪ್ರೌಢ ಶಿಕ್ಷಣವನ್ನು ಗದಗ ರಾಣಾ ಪ್ರತಾಪಸಿಂಗ್ ಶಾಲೆಯಲ್ಲಿ ಮುಗಿಸಿದರು. ಹುನಗುಂದ ಪಟ್ಟಣದಲ್ಲಿರುವ ಶ್ರೀ ವಿಜಯ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಅಭ್ಯಾಸಗೈದ ಇವರು ಧಾರವಾಡದ ಕೆಸಿಡಿ ಕಾಲೇಜಿ‌ನಲ್ಲಿ ಪದವಿ ಪೂರ್ಣಗೊಳಿಸಿದರು. ಅರ್ಥಶಾಸ್ತ್ರ ವಿಷಯದಲ್ಲಿ
ಸ್ನಾತಕೋತ್ತರ ಪದವಿಯನ್ನು ನಾಗಪುರ ವಿಶ್ವ ವಿದ್ಯಾಲಯದಲ್ಲಿ Rank ನಲ್ಲಿ ತೆರ್ಗಡೆಗೊಂಡಿದ್ದು ವಿಶೇಷ. ಬಿ.ಈಡಿ ಪದವಿಯನ್ನು ಮೈಸೂರು ವಿವಿಯಲ್ಲಿ ಪೂರೈಸಿದ್ದಾರೆ.

ಸರಕಾರಿ ಹುದ್ದೆ : ಇಂಟರ್ ಶಿಪ್ ಕೋರ್ಸ್ ಮೂಲಕ ಸಿಂಧನೂರು ತಾಲೂಕಿನ ಹಂಚಿನಾಳ ಕ್ಯಾಂಪ್ ನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಸೇವೆ ಆರಂಭಿಸಿದ ಮುತ್ತುರಡ್ಡಿ ಅವರ ಜೀವನ ಸಾಗಿದ್ದು ಮತ್ತಷ್ಟು ವಿಭಿನ್ನ. ಶಿಕ್ಷಕ ವೃತ್ತಿಯನ್ನು ಬಹಳಷ್ಟು ಇಷ್ಟಪಡುವ ಇವರು ತೃಪ್ತಿದಾಯಕವಾಗಿ ಕೆಲ ವರ್ಷಗಳ ಕಾಲ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಕೇವಲ ಶಿಕ್ಷಕರಾಗಿರದ ಇವರು ಕೆಇಎಸ್ ಪಾಸಾಗುವ ಮೂಲಕ ರೋಣ, ಗದಗ ಹಾಗೂ ಮುಂಡರಗಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿಗೆ ಅಷ್ಟೇ, ರಾಯಚೂರು ಡೈಟ್ ಪ್ರಾಚಾರ್ಯರಾಗಿ ಪದೋನ್ನತಿ ಪಡೆಯುವ ಮೂಲಕ ಸೇವೆಯಲ್ಲಿದ್ದ ಇವರನ್ನು ರಾಜ್ಯ ಸರಕಾರ ಕೊಪ್ಪಳ ಜಿಲ್ಲಾ ಡಿಡಿಪಿಐ ಆಗಿ ನೇಮಕಗೊಳಿಸಿದೆ. ಸಾಕಷ್ಟು ವೈಫಲ್ಯದಿಂದ ಕೂಡಿರುವ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತವನ್ನು ಚುರುಕುಗೊಳಿಸುವ ಹೊಣೆಗಾರಿಕೆ ಇವರ ಮೇಲಿರುವ ಪ್ರಮುಖ ಜವಾಬ್ದಾರಿಗಳಲ್ಲೊಂದಾಗಿದೆ. ಬಹಳಷ್ಟು ಕ್ರಿಯಾಶೀಲರಾಗಿರುವ ಮುತ್ತುರಡ್ಡಿ ಅವರು ತಮ್ಮದೇ ಜಿಲ್ಲೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿರುವುದು ನಮಗೆ ಹೆಮ್ಮೆಯ ಸಂಗತಿ ಅಲ್ಲವೇ..!?

ಪ್ರಶಸ್ತಿ : ಗದಗ ಜಿಲ್ಲೆಯ ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಸರಕಾರ ಇವರ ಆಡಳಿತ ವೈಖರಿ ಮೆಚ್ಚಿ ಉತ್ತಮ ಶಿಕ್ಷಣಾಧಿಕಾರಿ ಎಂದು ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಸ್ಮರಿಸಬಹುದಾಗಿದೆ..!