ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ರೈತರಿಂದ.! ರೈತರಿಗಾಗಿ..!!ರೈತರಿಗೋಸ್ಕರ…!!! ಎಂಬ ಧ್ಯೇಯ ವಾಕ್ಯದೊಂದಿಗೆ ಕೊಪ್ಪಳ ಜಿಲ್ಲಾ ತೋಟಗಾರಿಕೆ ಇಲಾಖೆಯು 23-05-2022 ರಿಂದ 30-05-2022 ರವರೆಗೆ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಂಡಿದೆ.
ಸಾಂಪ್ರದಾಯಕ ಬೆಳೆಗಳ ಕೃಷಿಯಿಂದ ಬೇಸತ್ತು ಹೋಗಿದ್ದ ನಮ್ಮ ರೈತರು ತಮ್ಮ ಆದಾಯವನ್ನು ಹೇಗಾದರು ಮಾಡಿ ಇಮ್ಮಡಿಗೊಳಿಸಬೇಕೆಂಬ ಕನಸು ಹೊತ್ತು ಜಿಲ್ಲೆಯ ರೈತರು ದಾಳಿಂಬೆ, ಮಾವು ಸೇರಿದಂತೆ ದ್ರಾಕ್ಷಿ , ಚಿಕ್ಕು , ಮೊಸಂಬಿ ಬೆಳೆಗಳನ್ನು ಬೆಳೆಯಲು ಮುಂದಾದರು. ಆದರೆ, ಆದಾಯ ಬೆಳೆಯಾಗಿದ್ದ ದಾಳಿಂಬೆಯನ್ನು ಈ ಭಾಗದಲ್ಲಿ ಹೆಚ್ಚಾಗಿ ಬೆಳೆದಿದ್ದರು. ದಾಳಿಂಬೆ ಬಂಗಾರದ ಬೆಳೆಯಾಗಿ ಕೂಡಾ ಹೊರ ಹೊಮ್ಮಿತ್ತು. ಅಲ್ಲದೆ, ದಾಳಿಂಬೆಗೆ ವಿಶ್ವ ಮಾರುಕಟ್ಟೆಯಲ್ಲಿ ಬಾರಿ ಬೆಲೆ ಸಿಕ್ಕಿತ್ತು. ಅದರ ಅಷ್ಟೇ, ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು. ಆದರೆ, 2005 ಬಳಿಕ ಈ ಬೆಳೆಗೆ ಒಕ್ಕರಿಸಿಕೊಂಡ ‘ದುಂಡಾಣು’ ರೋಗ ಎಂಬ ಮಾಯೆ ವೈರಸ್ ಅಂಟಿಕೊಂಡು ಈ ಸಮೃದ್ಧಿ ಬೆಳೆಯಾಗಿದ್ದ ದಾಳಿಂಬೆ ಬೆಳೆ ನೆಲಸಮವಾಗಿತು. ಇಲ್ಲಿಂದಲೇ ಜಿಲ್ಲೆಯಲ್ಲಿ ಎರಡನೇ ಪ್ರಭಾವಿ ಬೆಳೆಯಾದ ಹಣ್ಣುಗಳ ರಾಜ ‘ಮಾವು’ ದಾಳಿಂಬೆ ಬೆಳೆಯ ಜಾಗವನ್ನು ಆವರಿಸಿಕೊಂಡಿತು. ಆದರೆ, ವಿದೇಶ ಸೇರಿದಂತೆ ಹೊರ ರಾಜ್ಯಗಳಿಗೆ ರಫ್ತಿಗೆ ಕಷ್ಟಕರವಾದ ಬೆಳೆಯನ್ನು ಇಲ್ಲಿಯೇ ಮಾರಾಟ ಮಾಡಿ ಯೋಗ್ಯ ಬೆಲೆ ಕಂಡು ಕೊಳ್ಳಲು ರೈತರಿಗೆ ಮಾರಾಟ ಕೇಂದ್ರ ಒದಗಿಸಿಕೊಡಬೇಕಾಗಿರುವುದು ಅವಶ್ಯವಾಗಿತ್ತು.
ಇಂತಹ ಸಂದರ್ಭದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣಾ ಉಕ್ಕುಂದ ಮುಂದೆ ಬಂದು, ಇಲಾಖೆ ನೆರವಿನ ಮೂಲಕ ಮಾವು ಬೆಳೆಗಾರರಿಗೆ ಮಾರುಕಟ್ಟೆಗೆ ಅವಕಾಶ ಮಾಡಿಕೊಡುವುದಲ್ಲದೆ, ವಿವಿಧ ತಳಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಕೈಗೊಳ್ಳುತ್ತಿರುವುದು ಜಿಲ್ಲೆಯ ಮಾವು ಬೆಳೆಗಾರರಿಗೆ ಶಕ್ತಿ ತುಂಬಿದಂತಾಗಿದೆ. ಈ ಮಾವು ಮಾರಾಟ ಹಾಗೂ ಪ್ರದರ್ಶನ ಮೇಳದಲ್ಲಿ ಬೆನೀಸ್, ಮಲ್ಲಿಕಾ, ಆಫುಸ್, ತುತಾಪುರಿ, ಗೋವಾ ಸೇರಿದಂತೆ ವಿವಿಧ ಮಾವುಗಳು ಇಲ್ಲಿ ಕಮಾಲ್ ಮಾಡಲಿವೆ. ಮೇ 23 ರಿಂದ 30 ರವರೆಗೆ ಜರಗುವ ಮಾವು ಜಾತ್ರೆ ತರಹದಲ್ಲಿ ಜರಗುವ ಮೇಳದಲ್ಲಿ ಮಾವು ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೌಲಭ್ಯ ಪಡೆಯಬೇಕೆಂಬುವುದು ಅನ್ನದಾತರ ಆಶೆಯ..!!