ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜೇನು ನೊಣಗಳು ಇಲ್ಲಂದ್ರೆ ಸಾಕು, ಇಡೀ ಮನುಕುಲಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಇಂತಹ ಮನುಕುಲದ ಉದ್ಧಾರಕ್ಕಾಗಿಯೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟುಕೊಂಡಿರುವ ಜೇನುನೊಣಗಳಿಗಾಗಿಯೇ ಮೀಸಲಾಗಿರುವ ದಿನವಿದು. ಅಂದರೆ, ಇಂದು (ಮೇ-20) ವಿಶ್ವ ಜೇನುನೊಣಗಳ ದಿನ..!
ಜಗತ್ತಿನ ಸಸ್ಯ ಸಂಪತ್ತು ಅಲ್ಲದೆ, ಇಡೀ ಮನುಕುಲದ ಬದುಕಿಗೆ ಜೇನುನೊಣಗಳು ಬಹಳಷ್ಟು ಅವಶ್ಯಕ. ಕೋಟ್ಯಾನ್ ಕೋಟಿ ಜೀವಿಗಳಲ್ಲಿಯೇ ಅತ್ಯಂತ ಅವಶ್ಯಕ ಸ್ವಾವಲಂಬಿ ಜೀವಿಗಳಾದ ಜೇನುನೊಣಗಳನ್ನು ವರ್ಷದ ಒಂದು ದಿನವಾದರೂ ನೆನೆಯಲೇಬೇಕು.
ರಾಣಿ ಜೇನುನೊಣ
ಕಾಯಕನಿರತ ಸೂಕ್ಷ್ಮ ಜೀವಿಗಳಿಗೆ ಸಾಕ್ಷಿ ಜೇನುನೊಣಗಳು. ದಾದಿ ಜೇನುನೊಣಗಳು (ಕೆಲಸಗಾರ), ಗಂಡು ಜೇನುನೊಣಗಳು ಹಾಗೂ ರಾಣಿ ಜೇನುನೊಣ ಎಂಬ ವಿಧಗಳಲ್ಲಿನ ಜೇನುನೊಣಗಳು ಸೇರಿಕೊಂಡು, ಮಕರಂದ ತಯಾರಿಸುವ ಅವಿರತ ಕಾಯಕದ ಪ್ಯಾಕ್ಟರಿ ಎಂದರೆ ತಪ್ಪಾಗಲಾರದು. ತಮ್ಮ ತಮ್ಮ ಕಾರ್ಯಗಳನ್ನು ಬಹಳಷ್ಟು ಅಚ್ಚುಕಟ್ಟಾಗಿ ಹಾಗೂ ಚಾಚು ತಪ್ಪದೆ ಕೈಗೊಳ್ಳುವ ಜೇನುನೊಣಗಳ ಕಾರ್ಯ ಮಾತ್ರ ಅವಿಸ್ಮರಣೀಯವಾದದ್ದು. ಇಂತಹ ಕಾಯಕ ನಿಷ್ಠೆಗೆ ಹೆಸರುವಾಸಿಯಾಗಿರುವ ಜೇನು ನೊಣಗಳು ಎಂಬ ಸೂಕ್ಷ್ಮ ಜೀವಿಗಳಿಂದಾದರೂ ಮನುಕುಲ ಕಲಿಯುವುದು ಬಹಳಷ್ಟಿದೆ. ಅದರ ಅಷ್ಟೇ, ಜೇನು ನೊಣಗಳ ಸಂತತಿ ಉಳಿಸುವುದರ ಜೊತೆಗೆ ಮನುಕುಲದ ಉದ್ಧಾರಕ್ಕಾಗಿ ಸಂರಕ್ಷಿಸಬೇಕಾಗಿದೆ..!?