ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್|
ದಿನಾಂಕ 19-05-2022 ರಂದು ರಾತ್ರಿ ಆರಂಭವಾದ ಮಳೆ ಮರುದಿನ ಬೆಳಿಗ್ಗೆ ವರೆಗೂ ನಿರಂತರ ಸುರಿದ ಪರಿಣಾಮ ರಾಯಬಾಗಿ ಲೇಔಟ್ ಬಡಾವಣೆ ಸಂಪೂರ್ಣ ಜಲಾವೃತವಾದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಸಂಭವಿಸಿದೆ..!
ಹಳೇ ನೆರೆಬೆಂಚಿ ರಸ್ತೆಗೆ ಹೊಂದಿಕೊಂಡಿರುವ ರಾಯಬಾಗಿ ಲೇಔಟ್ ಮಳೆಗಾಲ ಪ್ರಾರಂಭವಾದರೆ ಸಾಕು ರಸ್ತೆಗಳ ತುಂಬೆಲ್ಲ ನೀರು ನಿಂತು ಸಂಪರ್ಕ ಕಡಿತಗೊಳ್ಳುವುದರ ಜೊತೆಗೆ ಮನೆಗಳಿಗೆ ಮಳೆ ನೀರು ನುಗ್ಗುವುದು ಸರ್ವೇ ಸಾಮಾನ್ಯವಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಲೈಔಟ್ ನಿವಾಸಿಗಳು ತತ್ತರಿಸಿಹೋಗಿದ್ದಾರೆ. 4, 5, 6ನೇ ವಾರ್ಡ್ ಸೇರಿದಂತೆ ಹಳೇ ನೆರೆಬೆಂಚಿ ರಸ್ತೆಯಿಂದ ಹರಿದು ಬರುವ ಅಪಾರ ಪ್ರಮಾಣದ ನೀರು ರಾಯಬಾಗಿ ಲೈಔಟ್ ಅಲ್ಲಿ ಸಂಗ್ರಹವಾಗುತ್ತದೆ. ಕಾರಣ, ಮಳೆ ನೀರು ಮುಂದೆ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ. ಈ ಕುರಿತು ಲೈಔಟಿನ ನಿವಾಸಿಗಳು ವಾರ್ಡ್ ಸದಸ್ಯೆಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಮತ್ತು ಶಾಸಕರಿಗೂ ಸಾಕಷ್ಟು ಬಾರಿ ತಿಳಿಸಿದರೂ ಸ್ಪಂಧಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ರಾಜಕಾಲುವೆಗೆ ಸೇರಬೇಕಾದ ಓಣಿಗಳ ಚರಂಡಿ ನೀರು ಮಳೆ ನೀರು ಲೈಔಟಲ್ಲಿ ಸಂಗ್ರಹವಾಗಿ ಅನೈರ್ಮಲ್ಯ ಉಂಟಾಗುತ್ತಿದ್ದು, ಇದರಿಂದ ಸಾಂಕ್ರಾಮಿಕ ಕಾಯಿಲೆ ಹರಡುವ ಸಾಧ್ಯತೆ ಇರುವುದರಿಂದ ಸಂಬಂಧಿಸಿದ ಮೇಲಧಿಕಾರಿಗಳು ರಾಯಬಾಗಿ ಲೈಔಟ್ ಪರಿಸರದ ಪರಿಸ್ಥಿಯನ್ನು ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ನಿವಾಸಿಗಳಾದ ಹನುಮೇಶ ಡಬೇರ, ಶಂಕ್ರಪ್ಪ ಗೊಂದಲಗೇರ, ಶಿವಪುತ್ರಪ್ಪ ಹಡಪದ, ಬುರಾನ ಟೇಲರ್, ವೀರಭದ್ರಪ್ಪ ನಿಡಗುಂದಿ, ಮಲ್ಲಪ್ಪ ಬಿನ್ನಾಳ, ಅಶೋಕ ಮೇಸ್ತ್ರಿ ಸೇರಿದಂತೆ ಇನ್ನಿತರರು ಆಗ್ರಹಿಸಿದ್ದಾರೆ..!!