‘ಪಿ.ಸುನೀಲಕುಮಾರ’ ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಬಾಗಲಕೋಟೆ : “ಕೊರೋನಾ ಕಂಟ್ರೋಲ್‌ ಕಿಂಗ್” ಎಂತಲೇ ಖ್ಯಾತಿಯ ಐಎಎಸ್ ಅಧಿಕಾರಿ ಪಿ.ಸುನೀಲಕುಮಾರ ಅವರು (21-05-2022) ಇಂದು ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು..!

ಪ್ರಭಾರಿ ಜಿಲ್ಲಾಧಿಕಾರಿಯಾಗಿದ್ದ ಜಿಪಂ ಸಿಇಓ ಟಿ.ಭೂಬಾಲನ್ ಅವರಿಂದ ಸುನೀಲಕುಮಾರ ಅವರು ಅಧಿಕಾರ ಸ್ವೀಕರಿಸಿದರು. ಪಿ.ಸುನೀಲಕುಮಾರ ಅವರು ಮೂಲತಃ ಆಂಧ್ರಪ್ರದೇಶ ರಾಜ್ಯದವರಾಗಿದ್ದು, ವಾರಂಗಲ್‍ನ ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‍ಐಟಿ) ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯೂನಿಕೇಶನ್ ಎಂಬ ವಿಷಯದಲ್ಲಿ ಇಂಜಿನೀಯರಿಂಗ್ ಪದವಿಧರರಾಗಿದ್ದಾರೆ. ಇಂಜನಿಯರಿಂಗ್ ಬಳಿಕ 2002 ರಿಂದ 2009 ವರೆಗೆ ಟಾಟಾ ಕನ್‍ಸಲ್ಟಂಟ್ ಸಾಫ್ಟವೇರ್ ಕಂಪನಿಯಲ್ಲಿ ಸಾಪ್ಟವೇರ್ ಇಂಜಿನೀಯರಾಗಿ 2 ವರ್ಷ ಭಾರತದಲ್ಲಿ ಹಾಗೂ 5 ವರ್ಷ ವಿದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ. ವಿದೇಶ ಸೇವೆಯ ನಂತರ ಭಾರತಕ್ಕೆ ಮರಳಿದ ಅವರು ಯುಪಿಎಸ್‍ಸಿ ಪರೀಕ್ಷೆ ಬರೆದು, 2011ರಲ್ಲಿ ಐ.ಎ.ಎಸ್ ತೇರ್ಗಡೆಹೊಂದಿರುತ್ತಾರೆ. ಆರಂಭದಲ್ಲಿ ಹಾಸನ ಜಿಲ್ಲೆಯಲ್ಲಿ 2 ವರ್ಷ ಪ್ರೊಬೇಷನರಿ ಅವಧಿ ಮುಗಿಸಿ, ಹೊಸಪೇಟೆಯಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಯಾದಗಿರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, 4 ವರ್ಷ ಬೆಂಗಳೂರಿನಲ್ಲಿ ಕಾರ್ಮಿಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ನಂತರ ಕೊಪ್ಪಳ ಜಿಲ್ಲಾಧಿಕಾರಿಯಾಗಿ ಸಾಕಷ್ಟು ಹೆಸರು ಮಾಡಿದ್ದು ಇವರ ಆಡಳಿತದ ವಿಶೇಷ. ಕೊರೋನಾ ಹಾವಳಿ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದು ಮಾತ್ರ ಸ್ಮರಣೀಯವಾದದ್ದು. ಕೊರೋನಾ ನಿಯಂತ್ರಣಕ್ಕೆ ಇವರ ತೆಗೆದುಕೊಂಡ ನಿರ್ಣಯಗಳು ಕೊಪ್ಪಳದವರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯಾಗಿ ಉಳಿದುಕೊಂಡಿವೆ.
ಸರಕಾರ ಇವರನ್ನ ವಿಜಯಪುರ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿತ್ತು. ಈಗ ಮತ್ತೆ ಮುಳುಗಡೆ ನಗರ ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ, ಆಡಳಿತ ಆರಂಭಿಸಿದ್ದಾರೆ..!!