ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಮಾವು ಪ್ರಿಯರಿಗೊಂದು ಸುವರ್ಣಾವಕಾಶ ಒದಗಿಬಂದಿದೆ. ಜಿಲ್ಲಾ ತೋಟಗಾರಿಕೆ ಇಲಾಖೆಯು ತನ್ನ ಕಚೇರಿ ಆವರಣದಲ್ಲಿ ನೈಸರ್ಗಿಕ ಮತ್ತು ವೈಜ್ಞಾನಿಕವಾಗಿ ಮಾಗಿಸಿದ ವಿವಿಧ ತಳಿಗಳ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ-2022 ಎಂಬ ವಿಶಿಷ್ಟ 8 ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದೆ..!
ಇಂತಹ ವಿಶಿಷ್ಟತೆಯಿಂದ ಕೂಡಿದ (Koppal Mango Festival-2022) ಮೇಳಕ್ಕೆ ಗಣಿ ಸಚಿವ ಹಾಲಪ್ಪ ಆಚಾರ ಚಾಲನೆ ನೀಡಿದರು. ರೈತರಿಂದ ನೇರವಾಗಿ ಗ್ರಾಹಕರಿಗೆ ಖರೀದಿಯಾಗುವ ಕ್ರಮವನ್ನು ಸಚಿವರು ಮೆಚ್ಚಿಕೊಂಡರು. ಯಾವುದೇ ರಾಸಾಯನಿಕ ಪದಾರ್ಥಗಳಿಂದ ಹಣ್ಣುಗಳನ್ನು ಮಾಗಿಸುವ ಕ್ರಮದಿಂದ ದೂರವಿರುವಂತೆ ರೈತರಿಗೆ ಸಚಿವರು ಸಲಹೆ ಕೂಡಾ ನೀಡಿದರು. ರೈತರು ನೇರವಾಗಿ ಮಾರುಕಟ್ಟೆ ಸೌಲಭ್ಯ ಪಡೆಯಲು ಕೈಗೊಂಡಿರುವ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣಾ ಉಕ್ಕುಂದ ಅವರ ಸೇವೆಯನ್ನು ಬಣ್ಣಿಸಿದರು.ರೈತರ ಉದ್ಧಾರಕ್ಕಾಗಿ ಇಂತಹ ಮೇಳಗಳ ಅವಶ್ಯಕತೆ ಬಹಳಷ್ಟಿದೆ ಎಂದು ಸಚಿವರು ಅಭಿಪ್ರಾಯವ್ಯಕ್ತಪಡಿಸಿದರು. ಹೆಚ್ಚು ಹೆಚ್ಚು ರೈತರು ಮಾವು ಮೇಳದ ಸದುಪಯೋಗ ಪಡಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣಾ ಉಕ್ಕುಂದ ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್, ಜಿಪಂ ಸಿಇಓ ಬಿ.ಫೌಜಿಯಾ ತರುನ್ನಮ್, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಯೋಜನೆಯ (ಕಾಡಾ) ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಬಿ.ಹೆಚ್.ಎಮ್, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ಬಿ. ಪಾಟೀಲ್ ಸೇರಿದಂತೆ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ವಿವಿಧ ಬಗೆಯ ರುಚಿ ರುಚಿಯ ಮಾಗಿದ ಹಣ್ಣುಗಳ ಮಾರಾಟ ಮೇಳದಲ್ಲಿ ಜೋರಾಗಿದ್ದಿದ್ದು ಕಂಡು ಬಂದಿತು. ಇನ್ನೂ ಕೆಲವರು ಹಣ್ಣುಗಳ ರಾಜನೆಂದು ಕರೆಯಿಸಿಕೊಳ್ಳುವ ‘ಮಾವು’ ಹಣ್ಣುಗಳಿಗೆ ಆನ್ ಲೈನ್ ಬುಕ್ ಮೊರೆಹೊಗಿದ್ದು ಕಂಡು ಬಂದಿತು..!!