ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಸಂಗೀತಕ್ಕೆ ಮನಸೋಲದವರಾರು ಇಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಶೃತಿ ಬದ್ಧ ಸುಲಲಿತವಾಗಿ ಹಾಡುವ ಮೂಲಕ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಅಂಧ ಕಲಾವಿದ ಹಾಗೂ ತನ್ನ ಪತ್ನಿ ಜೊತೆಗೆ ರಸ್ತೆ ಬದಿ ಕಳಿತು ಸಂಗೀತ ರಸದೌತಣ ಉಣಬಡಿಸುವ ಮೂಲಕ ಸಾರ್ವಜನಿಕರ ಮನಸೂರೆಗೊಳಿಸಿದರು..!
ಲಿಂಗಸೂರು ಪಟ್ಟಣದ ವಿಶ್ವಕರ್ಮ ಸಮುದಾಯದ ಶಿವಕುಮಾರ ಆಚಾರ ಹಾಗೂ ಅವರ ಧರ್ಮಪತ್ನಿ ನಾಗರತ್ನ ಅವರು ನಾಡಿನ ಹೆಸರಾಂತ ಗಾಯಕರಾದ ದಿವಂಗತ ಡಾ.ಪಿ.ಬಿ.ಶ್ರೀನಿವಾಸ, ಡಾ.ರಾಜಕುಮಾರ, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಹಳೆಯ ಚಿತ್ರಗೀತೆ ಹಾಗೂ ಭಕ್ತಿ ಗೀತೆಗಳನ್ನು ಸಂಗೀತ ಪರಿಕರಗಳಿಲ್ಲದೇ ಈಗಿನ ಕರೋಕೆ ಸಂಗೀತಕ್ಕೆ ಧ್ವನಿ ನೀಡುವ ಮೂಲಕ ಪ್ರಸ್ತುತ ಪಡಿಸಿದ್ದು, ಶ್ರೋತೃಗಳ ಗಮನ ಸೆಳೆದಿದ್ದಷ್ಟೇ ಅಲ್ಲದೆ, ಪಾದಾಚಾರಿಗಳನ್ನು ಮೂಖವಿಸ್ಮಿರನ್ನಾಗಿಸಿತು.
ಮೂಲ ಲಿಂಗಸೂರಿನವರಾದರೂ ದಂಪತಿಗಳು ಬದುಕು ಕಟ್ಟಿಕೊಳ್ಳಲು ರಾಜಧಾನಿ ಬೆಂಗಳೂರಿನಲ್ಲಿ
ವಾಸವಾಗಿದ್ದರು. ಜೀವನ ಮಾರ್ಗ ಸಂಸ್ಥೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತಿದ್ದರು. ಮಹಾಮಾರಿ ಕೊರೋನಾ ಸಾಂಕ್ರಾಮಿಕ ಹಿನ್ನೆಲೆ ಲಾಕ್ ಡೌನ್ ಜಾರಿಯಾಯಿತು. ಸಂಸ್ಥೆಯನ್ನು ಸಹ ಮುಚ್ಚಲಾಯಿತು. ಇದರಿಂದ ತುಂಬಾ ತೊಂದರೆಗೆ ಒಳಗಾದ ಬಡ ಕಲಾವಿದ ದಂಪತಿ ಸಧ್ಯ ಊರೂರು ಅಲೆಯುತ್ತ ತಮ್ಮ ಅದ್ಭುತ ಸಂಗೀತ ಕಲೆಯನ್ನು ರಸ್ತೆ ಬದಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಸ್ತುತ ಪಡಿಸುತಿದ್ದಾರೆ.
ಜಾತ್ರೆ, ಮದುವೆ, ಕನ್ನಡ ರಾಜ್ಯೋತ್ಸವ ಹಾಗೂ ಇತರೆ ಶುಭ ಕಾರ್ಯಕ್ರಮಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮ ನಡೆಸಿಕೊಡಲು ಉತ್ಸುಕರಾಗಿದ್ದು, ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಇವರ ಸಂಗೀತ ಕಲೆಯನ್ನು ಗೌರವಿಸಿ ವೇದಿಕೆ ಕಲ್ಪಿಸಲು ಸಂಗೀತ ಆಸಕ್ತರು ಅಂಧ ಕಲಾವಿದ ಶಿವಕುಮಾರ ಆಚಾರ ಅವರ ಮೊಬೈಲ್ ಸಂಖ್ಯೆ 9611933183 ಮತ್ತು
6360464428 ಸಂಪರ್ಕಿಸಿ ಪ್ರೋತ್ಸಾಹಿಸಿ ಎಂಬುದು ‘ಕೃಷಿ ಪ್ರಿಯ’ ಪತ್ರಿಕೆಯ ಆಶಯ.