ಎಲ್ಲವೂ ಮಣ್ಣಿನಿಂದಲೇ : ಸಹದೇವ ಯರಗೊಪ್ಪ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಮಣ್ಣಿನ ಫಲವತ್ತತೆ ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ರೈತರಿಗೆ ಸಲಹೆ ನೀಡಿದರು.

ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಇಲಾಖೆ ಹಮ್ಮಿಕೊಂಡಿದ್ದ ‘ಅಕ್ಕಡಿ ಬೆಳೆ ಬೆಳೆಯೋಣ..! ತಕ್ಕಡಿ ತುಂಬಾ ತೂಗೋಣ’..!! ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿಲ್ಲಿ ರೈತರಿಗೆ ತೊಗರಿ ಹಾಗೂ ಹೆಸರು ಬೀಜಗಳ ಕಿರು ಚೀಲಗಳನ್ನು ವಿತರಿಸಿ ಮಾತನಾಡಿದರು. ಅಕ್ಕಡಿ ಬೆಳೆಗಳಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದರ ಜೊತೆಗೆ ದೇಶದ ಆಹಾರ ಭದ್ರತೆಗೆ ಕೈ ಜೋಡಿಸಿದಂತಾಗುತ್ತದೆ. ಎಲ್ಲವೂ ಮಣ್ಣಿನಿಂದಲೇ ಎಂಬ ಮೂಲ ಪರಿಕಲ್ಪನೆ ರೈತರಲ್ಲಿ ಮೂಡಬೇಕಾಗಿದೆ ಎಂದು ಸಹದೇವ ಯರಗೊಪ್ಪ ಅವರು ಅಭಿಪ್ರಾಯವ್ಯಕ್ತಪಡಿಸಿದರು. ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಗನಗೌಡ ಪೊಲೀಸ್ ಪಾಟೀಲ ಹಾಗೂ ಸಹಾಯಕ ಕೃಷಿ ಅಧಿಕಾರಿ ವೀರೇಶ ಅಂತೂರು ಬೀಜೋಪಚಾರ ಸೇರಿದಂತೆ, ಬಿತ್ತನೆ ಪೂರ್ವ ಹಾಗೂ ನಂತರದ ಮುಂಜಾಗ್ರತಾ ಕ್ರಮಗಳ ಬಗ್ಗೆ ಭಾಗವಹಿಸಿದ್ದ ರೈತರಿಗೆ ಮಾಹಿತಿ ನೀಡಿದರು. ಹನುಮನಾಳ ಗ್ರಾಪಂ ಅಧ್ಯಕ್ಷೆ ಶಾಂತವ್ವ ಲೆಂಕಪ್ಪ ಸಾಂತಗೇರಿ ಅಧ್ಯಕ್ಷತೆವಹಿಸಿದ್ದರು. ಸಾಹಿತಿ ಪ್ರಮೋದ ತುರ್ವಿಹಾಳ, ಹಾಬಲಕಟ್ಟಿ ಗ್ರಾಪಂ ಅಧ್ಯಕ್ಷೆ ಪಾರ್ವತೆವ್ವ ಕಿಟಗನ್ನವರ, ಸದಸ್ಯರಾದ ಶಿವಪ್ಪ ದಮ್ಮೂರು, ಶರಣಪ್ಪ ಕುಂಬಾರ (ನಿಡಶೇಸಿ), ಮುಖಂಡರಾದ ರಾಜಶೇಖರ ವಡಗೇರಿ, ಸಹಾಯಕ ಕೃಷಿ ಅಧಿಕಾರಿ ವಿ.ಎಂ.ಹಿರೇಮಠ ಸೇರಿದಂತೆ ರೈತರು, ಕೃಷಿ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ಹಾಬಲಕಟ್ಟಿ ಗ್ರಾಪಂ ಭಾಗದ ರೈತರಿಗೆ ಬೀಜದ ಕಿರು ಚೀಲಗಳನ್ನು ವಿತರಿಸಲಾಗಿತು.