ಎನ್.ಡಿ.ಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ‘ದ್ರೌಪದಿ ಮುರ್ಮು’ ಆಯ್ಕೆ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಎನ್.ಡಿ.ಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಜಾರ್ಖಂಡ್ ರಾಜ್ಯಪಾಲರಾಗಿದ್ದ “ದ್ರೌಪದಿ ಮುರ್ಮು” ಅವರ ಹೆಸರನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ವಿಭಿನ್ನ ಅಚ್ಚರಿಗೆ ಕಾರಣವಾಗಿದ್ದಾರೆ..!

ಓಡಿಸ್ಸಾ ಮೂಲದ ಬುಡಕಟ್ಟು ಸಮುದಾಯದ 64 ವರ್ಷದ ದ್ರೌಪದಿ ಮುರ್ಮು ಅವರು ಎನ್.ಡಿ.ಎ ರಾಷ್ಟಪತಿ ಅಭ್ಯರ್ಥಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಧಿಕೃತವಾಗಿ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಸಂಸದೀಯ ಮಂಡಳಿಯ ಚರ್ಚೆ ಮತ್ತು ತಿರ್ಮಾನ ಬಳಿಕ ಘೋಷಿಸಲಾಗಿದೆ.

20-06-1958 ರಂದು ಓಡಿಸ್ಸಾದ ಮಯೂರಬಂಜ್ ಜಿಲ್ಲೆಯ ಬೈದಾಪೋಸಿ ಗ್ರಾಮದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರು  1997 ರಲ್ಲಿ ರಾಯರಂಗಪುರದ ಕೌನ್ಸಿಲ್ ರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ ಇವರು ಓಡಿಸ್ಸಾ ವಿಧಾನಸಭೆಗೆ 2000 ರಲ್ಲಿ ಆಯ್ಕೆಯಾಗುವ ಮೂಲಕ ವಾಣಿಜ್ಯ ಮತ್ತು ಸಾರಿಗೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿ, ಸಾಕಷ್ಟು ಹೆಸರು ಗಳಿಸಿದ ಇವರನ್ನ ಗುರುತಿಸಿದ ಬಿಜೆಪಿಯು 2015 ರಲ್ಲಿ ಜಾರ್ಖಂಡ್ ರಾಜ್ಯದ ರಾಜ್ಯಪಾಲರನ್ನಾಗಿ ನೇಮಿಸಿತ್ತು. ಅಲ್ಲದೆ, 2002 ರಿಂದ 2009 ರವರೆಗೆ ಬಿಜೆಪಿ ಪರಿಶಿಷ್ಟ ಪಂಗಡ ಮೊರ್ಚಾದ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯರಾಗಿ ಸೇವೆ ಸಲ್ಲಿಸಿರುವುದು ವಿಶೇಷ.

ಸೇವೆ : ಕಲಾ ಪದವೀಧರೆಯಾಗಿರುವ ದ್ರೌಪದಿ ಮುರ್ಮು ಅವರು ರಾಯರಂಗಪುರ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಗೌರವ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ.

ಮೋದಿಯಿಂದ ಶುಭಾಶೆಯಗಳು : ಬಿಜೆಪಿ ರಾಷ್ಟಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರ ಹೆಸರು ಘೋಷಣೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಶುಭಾಶೆಯಗಳನ್ನು ಕೋರಿದ್ದಾರೆ. ದ್ರೌಪದಿ ಮುರ್ಮು ಅವರು ದೇಶದ ಅತ್ಯುತ್ತಮ ರಾಷ್ಟಪತಿಯಾಗಿ ಹೊರಹೊಮ್ಮಲಿದ್ದಾರೆ. ಬುಡಕಟ್ಟು ಸಮುದಾಯದಿಂದ ಬಂದಿರುವ ದ್ರೌಪದಿ ಅವರು ಸಮಾಜದ ಕಟ್ಟಕಡೆಯ ಸಮುದಾಯದವರು ಸೇರಿದಂತೆ ಬಡವರ, ದೀನದಲಿತರ, ಮಹಿಳೆಯರ ಹಾಗೂ ಶೋಷಿತ ವರ್ಗದವರ ಪಾಲಿಗೆ ನೆಚ್ಚಿನ ರಾಷ್ಟಪತಿಯಾಗಲಿದ್ದಾರೆ ಎಂದು ನರೇಂದ್ರ ಮೋದಿ ಆಶಯವ್ಯಕ್ತಪಡಿಸಿದ್ದಾರೆ..!!