ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ‘ಅನ್ ಕ್ರಾಸ್’ ಎಂಬ ಸೂಚನೆಯಿಂದ ಕಿತ್ತು ಹಾಕುವ ‘ಹತ್ತಿ ಬೆಳೆಗೆ’ ಯಾವುದೇ ತರಹದ ಪರಿಹಾರ ಇಲ್ಲದೆ ಪ್ರತಿವರ್ಷ ಸದ್ದಿಲ್ಲದಂತೆ ಹತ್ತಿ ಬೆಳೆಗಾರರು ಲಕ್ಷಾಂತರ ರೂಪಾಯಿಗಳ ಹಾನಿ ಅನುಭವಿಸುತ್ತಿದ್ದಾರೆ..!
ಖಾಸಗಿ ಬೀಜ ಉತ್ಪಾದನಾ ಕಂಪನಿಗಳು ಮುಂದೆ ಬಂದು, ರೈತರಿಗೆ ಲಾಭದಾಯಕ ಹತ್ತಿ ಬೆಳೆ ಬೆಳೆಯುವಂತೆ ನಂಬಿಸಿ ಬೆನ್ನು ಬಿದ್ದು (ಕ್ರಾಸ್ ಪ್ಲಾಟ್) ಹತ್ತಿ ಬೀಜ ನೀಡಿ, ಬಳಿಕ ಅನ್ ಕ್ರಾಸ್ ಆಗುವ (ಗಂಡು) ಹತ್ತಿ ಬೆಳೆ ಬೆಳೆದಿದ್ದೀರಿ ಎಂದು ಬೆಳೆ ಕಿತ್ತು ಹಾಕುವ ಮೂಲಕ ರೈತರಿಗೆ ದ್ರೋಹ ಮಾಡುವ ಬೀಜ ಉತ್ಪಾದನಾ ಕಂಪನಿಗಳ ಕರ್ಮಕಾಂಡವಿದು.
ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ತುಂಬೆಲ್ಲಾ ಕ್ರಾಸ್ ಹತ್ತಿ ಬೆಳೆಯಲು ರೈತರಿಗೆ ಖಾಸಗಿ ಬೀಜ ಉತ್ಪಾದನಾ ಕಂಪನಿಗಳು ಮಾಡುವ ಬಹಿರಂಗ ಕೋಟ್ಯಂತರ ರೂಪಾಯಿಗಳ ಮೊಸದ ಅವ್ಯವಹಾರ ಅಂದರೆ ತಪ್ಪಾಗಲಾರದು.
ಯಾವ ತರಹದ ಮೊಸ..!? : ಕ್ರಾಸ್ ಮಾಡುವ ಹತ್ತಿ ಬೀಜಗಳನ್ನು ವಿತರಿಸುವ ಖಾಸಗಿ ಬೀಜ ಉತ್ಪಾದನಾ ಕಂಪನಿಗಳು ಆರಂಭದಲ್ಲಿ ರೈತರಿಗೆ ಯಾವುದೇ ತರಹದ ಮಾಹಿತಿ ನೀಡದೆ, ಬೀಜ ನಾಟಿಗೆ ಮುಂದಾಗುತ್ತವೆ. ಹತ್ತಿ ಬೆಳೆದು, 35 ರಿಂದ 50 ದಿನಗಳೊಳಗಾಗಿ ಜಮೀನಿಗೆ ಬಂದು ಫಲಭರಿತ ಹತ್ತಿ ಬೆಳೆಯ ಸಾಲುಗಳಲ್ಲಿ ನಿಂತು, ಇದರಲ್ಲಿ ಹತ್ತಿ ಬೆಳೆಯನ್ನು (ಗಂಡು ಮತ್ತು ಹೆಣ್ಣು ತಳಿ) ಮಿಶ್ರಣವಾಗಿ ಬೆಳೆದಿದ್ದೀರಿ. ಇದರಲ್ಲಿರುವ ‘ಗಂಡು’ ತಳಿ ಹತ್ತಿ ಬೆಳೆಯನ್ನು ಕಿತ್ತು ಹಾಕಬೇಕು ಎಂಬುದಾಗಿ ಬೀಜ ನೀಡಿದ ಖಾಸಗಿ ಕಂಪನಿ ನೌಕಕರು, ಸಿಬ್ಬಂದಿ ಹಾಗೂ ಬೀಜ ನೀಡಲು ಮನವಲಿಸಿದ ಏಜೆಂಟರು ರೈತರಿಗೆ ಸೂಚನೆ ನೀಡಿ ಹೋಗುತ್ತಾರೆ. ಈಗಾಗಲೇ ಕೈಗೆ ಬಂದಿದ್ದ ಬೆಳೆಯನ್ನು ಕಿತ್ತು ಹಾಕುವ ಕೆಲಸ ಮಾತ್ರ ರೈತರಿಗೆ ನೋವುಂಟು ಮಾಡುತ್ತದೆ. ಎಕರೆ ಬೆಳೆಗೆ ಜಮೀನು ಹದ, ಕಳೆ, ಗಳೆ, ಗೊಬ್ಬರ, ಕ್ರಿಮಿನಾಶಕ ಸಿಂಪಡಣೆ ಹಾಗೂ ಕೂಲಿಯಿಂದಾಗುವ ಸಾವಿರಾರು ರೂಪಾಯಿಗಳಷ್ಟು ಕರ್ಚುಮಾಡಿ ಅರ್ಧದಷ್ಟು ಬೆಳೆ ಕಿತ್ತು ಹಾಕುವ ರೈತರ ಗೋಳು ಕೇಳುವರು ಯಾರು, ಇದಕ್ಕೆ ಯಾರು ಪರಿಹಾರ ನೀಡುವವರು ಎಂಬುದು ಯಕ್ಷ ಪ್ರಶ್ನೆಯಾಗಿದೆ..!!
(ಸರಣಿ ಮುಂದುವರೆಯುವುದು…)
(ನಾಳಿನ ವಿಶೇಷ)
– ಅನ್ ಕ್ರಾಸ್ ಹತ್ತಿ ಕಿತ್ತು ಹಾಕಲು ರೈತರೇ.. ಹಣ ನೀಡಬೇಕು..!

