ಬೆಳಗಾವಿಯಲ್ಲೊಂದು ಅತ್ಯಾಕರ್ಷಕ ಗಾಂಧಿ ಭವನ ನಿರ್ಮಾಣ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಬೆಳಗಾವಿ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜೀವನಧಾರೆಗಳ ಎಲ್ಲ ಮಗ್ಗುಲುಗಳನ್ನು ತೆರೆದಿಡುವ ಜನಾಕರ್ಷಣೆಯ ‘ಗಾಂಧಿ ಭವನ’ ಬೆಳಗಾವಿಯ ಪೀರನವಾಡಿಯಲ್ಲಿ ಲೋಕಾರ್ಪಣೆಗೊಂಡಿತು..!

ಕುಂದಾನಗರಿಯ ಅಣತಿ ದೂರದ ಪೀರನವಾಡಿ ಬಳಿಯ ಎರಡು ಎಕರೆ ವಿಶಾಲ ಹಾಗೂ ಪ್ರಶಾಂತವಾದ ಸ್ಥಳದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂರು ಕೋಟಿ ರೂಪಾಯಿಗಳ ಅನುದಾನದಲ್ಲಿ ಸ್ಥಳೀಯ ನಿರ್ಮಿತಿ ಕೇಂದ್ರದ ನುರಿತ ಇಂಜಿನಿಯರ್‌ ಗಳ ಅಚ್ಚುಕಟ್ಟಿನ ಭವ್ಯ ಸುಸಜ್ಜಿತ ಗಾಂಧಿ ಭವನ ಸಾರ್ವಜನಿಕರ ವೀಕ್ಷಣೆಗೆ ದಿನಾಂಕ 27-06-2022 ರಂದು ಅನಾವರಣಗೊಳಿಸಲಾಯಿತು.

ಗಾಂಧೀಜಿಯವರ ತತ್ವ ಮತ್ತು ಸಿದ್ಧಾಂತಗಳ ಜೀವಂತಿಕೆಗಾಗಿ ಬಯಲು ರಂಗಮಂದಿರ ಮತ್ತು ಡಿಜಿಟಲ್ ಲೈಬ್ರರಿ ನಿರ್ಮಿಸಲಾಗುವುದು ಎಂದು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಭರವಸೆವ್ಯಕ್ತಪಡಿಸಿದರು.

ಅನಾವರಣ : ಗಾಂಧಿ ಭವನದ ಆವರಣದಲ್ಲಿ ಸ್ಥಾಪಿಸಿದ ಧ್ಯಾನಸ್ಥ ಗಾಂಧಿಜಿಯವರ ಕಂಚಿನ ಪುತ್ಥಳಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಅನಾವರಣಗೊಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧಿ ಭವನದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಕೈಗೊಳ್ಳಲು ಭವನದ ಆವರಣದಲ್ಲಿ ಬಯಲು ರಂಗಮಂದಿರ ಮತ್ತು ಗ್ರಂಥಾಲಯ ಸ್ಥಾಪನೆಯ ಅಗತ್ಯವಿದೆ ಎಂದು ಆಶಯವ್ಯಕ್ತಪಡಿಸಿದರು.

ಸನ್ಮಾನ : ಭವ್ಯ ‘ಗಾಂಧಿ ಭವನ’ ಕಟ್ಟಡ ನಿರ್ಮಾತೃ ಸಂಸ್ಥೆಯಾದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಶೇಖರಗೌಡ ಕುರಡಗಿ, ಅಧಿಕಾರಿ ನಾಗರಾಜ ಪಾಟೀಲ ಸೇರಿದಂತೆ ಗಾಂಧೀಜಿ ಕಂಚಿನ ಪ್ರತಿಮೆ ಕಲಾವಿದ ಕೊಲ್ಲಾಪುರದ ಲಲಿತಾ ಡೊಂಗರಸಾನೆ ಇವರಗಳನ್ನು ಸಚಿವ ಗೋವಿಂದ ಕಾರಜೋಳ ಸೇರಿದಂತೆ ಶಾಸಕರು ಸನ್ಮಾನಿಸಿ ಸತ್ಕರಿಸಿದರು.

ವರ್ಷವಿಡೀ ಕಾರ್ಯಕ್ರಮ : ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಬೆಳಗಾವಿಯಲ್ಲಿ ಮೊಟ್ಟ ಮೊದಲು ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರ 100 ವರ್ಷಗಳ ಸ್ಮರಣೆಗಾಗಿ ಇಲ್ಲಿನ ಗಾಂಧಿ ಭವನದಲ್ಲಿ ಒಂದು ವರ್ಷವಿಡೀ ನಿರಂತರ ಕಾರ್ಯಕ್ರಮಗಳ ಭಾಗ್ಯ..!

ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಧಾರವಾಡ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಡೊಳ್ಳಿನ, ವಾರ್ತಾ ಇಲಾಖೆ ಸಿಬ್ಬಂದಿ, ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರು ಬೆಳಗಾವಿಯ ಮತ್ತೊಂದು ಐತಿಹಾಸಿಕ ದಾಖಲೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು..!!