ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಸಮಾಜದಲ್ಲಿ ವೈದ್ಯಕೀಯ ರಂಗ ಸೇರಿದಂತೆ ಎಲ್ಲಾ ರಂಗಗಳಲ್ಲಿ ನಿರತರಾಗಿರುವವರು ತಮ್ಮ ಸ್ವಾರ್ಥ ಬದುಕಿನ ಜೊತೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ಬದುಕು ಸಾರ್ಥಕವಾಗಲು ಸಾಧ್ಯ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ದಿನಾಂಕ 01-07-2022 ರಂದು ವಿಜಯ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಹಾಸ್ಪಿಟಲ್, ಆಯುಷಿ ಬಿರಾದಾರ ಗ್ರೂಫ್ಸ್, 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಾಗೂ ಹಿರಿಯ ವೈದ್ಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು..!
ಸಮಾಜದ ಕಟ್ಟಕಡೆಯ ಬಡ ವ್ಯಕ್ತಿಯನ್ನು ಗುರುತಿಸಿ ಅವನಿಗೆ ಉಚಿತ ಸೇವೆ ಮಾಡುವದರಿಂದ ವೃತ್ತಿಗೆ ವೃತ್ತಿ ಬದುಕಿಗೆ ಗೌರವ ಸಿಗುತ್ತದೆ. ಬಡವರನ್ನು ಗುರುತಿಸಿ ಉಚಿತ ಚಿಕಿತ್ಸೆ ನೀಡುವದರಿಂದ ವೈದ್ಯರ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ಮುಖೇಶ್ ನಿಲೋಗಲ್ ಮಾತನಾಡಿ, ವೈದ್ಯರು ಮನುಷ್ಯನ ಆರೋಗ್ಯ ಕಾಪಾಡಿದರೆ ಪತ್ರಕರ್ತರು ಸಮಾಜದ ಸ್ವಾಸ್ಥ್ಯ ಕಾಪಾಡುತ್ತರೆ ಇಡೀ ಸಮಾಜಕ್ಕೆ ಇವರಿಬ್ಬರ ಸೇವೆ ಶ್ಲಾಘನೀಯವಾದ್ದು ಎಂದು ಹೇಳಿದರು..!
ದಂತವೈದ್ಯ ಡಾ.ವಿಜಯಕುಮಾರ್ ಬಿರಾದಾರ ಎಂ.ಡಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ದಂತವೈದ್ಯನಾಗಿ ಸೇವೆ ಸಲ್ಲಿಸಿ ಸದ್ಯ ಕುಷ್ಟಗಿ ಪಟ್ಟಣದಲ್ಲಿ ನೆಲೆಸಿದ್ದು, ಇಲ್ಲಿ ದಂತ ಆಸ್ಪತ್ರೆ ತೆರೆದು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಸಾರ್ವಜನಿಕರಿಗೆ ಅನುಕೂಲಕರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಹನುಮಸಾಗರ ಪಟ್ಟಣದಲ್ಲೂ ಆಸ್ಪತ್ರೆ ತೆರೆದು ಸೇವೆ ನೀಡಲಾಗುತ್ತಿದೆ ಅದರ ಸದೂಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ರಾಷ್ಟ್ರೀಯ ಹಣ್ಣು ಬೆಳೆಗಾರರ ಸಂಘದ ಉಪಾಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಸರ್ಕಾರ ಸಾರ್ವಜನಿಕರಿಗೆ ಅನಾವಶ್ಯಕವಾಗಿ ನೀಡುವ ಉಚಿತ ಸೌಲಭ್ಯಗಳನ್ನು ತೆಗೆದು ಮೆಡಿಕಲ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಲು ಮುಂದಾಗಬೇಕು. ಇದರಿಂದ ರಾಜ್ಯದಲ್ಲಿ ಕೋಟಿ ರೂಪಾಯಿ ವ್ಯಯಿಸಿ ಎಂಬಿಬಿಎಸ್ ಓದುವುದು ತಪ್ಪುತ್ತದೆ. ಸಮಾಜದಲ್ಲಿ ದುಬಾರಿ ವೈದ್ಯಕೀಯ ಚಿಕಿತ್ಸೆಗೆ ಕಡಿವಾಣ ಬೀಳಲು ಸಾಧ್ಯ. ಈ ನಿಟ್ಟಿನಲ್ಲಿ ಶಾಸಕರು ರಾಜ್ಯ ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಬೇಕು ಎಂದು ಮನವಿ ಮಾಡುವ ಮೂಲಕ ಒತ್ತಾಯಿಸಿದರು.
ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಶಾರದಾ ಶೆಟ್ಟರ್ ಮಾತನಾಡಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ನಿರ್ದೇಶಕ ಡಾ.ರವಿಕುಮಾರ ದಾನಿ, ನೇತ್ರ ತಜ್ಞ ಡಾ. ಸುಶೀಲಕುಮಾರ ಕಾಖಂಡಕಿ, ಇಲಕಲ್ಲನ ಖ್ಯಾತ ದಂತ ವೈದ್ಯ ಡಾ. ರೂಪೇಶ ನಗರಿ, ಕುಷ್ಟಗಿ ಕಸಾಪ ತಾಲೂಕಾಧ್ಯಕ್ಷ ವಿರೇಶ ಬಂಗಾರಶೆಟ್ಟರ, ಶರಣಬಸವೇಶ್ವರ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ, ಶ್ರೀ ಸಾಯಿ ಶಂಕರ ಬಿ.ಎಸ್.ಎಸ್.ಎನ್. ಅಧ್ಯಕ್ಷ ಮಲ್ಲಿಕಾರ್ಜುನ ಬಳಿಗಾರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಹಿರಿಯ ವೈದ್ಯರಾದ ಡಾ.ಅಣ್ಣಾರಾವ್, ಡಾ.ದೇಸಾಯಿ, ಡಾ.ಎನ್.ಎಸ್. ಪಾಟೀಲ್ ಇವರುಗಳಿಗೆ ಫಲ, ಪುಷ್ಪ ನೀಡಿ ಗೌರವಿಸಲಾಯಿತು.
ಅದೇರೀತಿ ಪತ್ರಿಕಾ ದಿನಾಚರಣೆ ಅಂಗವಾಗಿ ಹಿರಿಯ ಪತ್ರಕರ್ತರಾದ ಮುಕೇಶ ನಿಲೋಗಲ್ ಹಾಗೂ ರವೀಂದ್ರ ಬಾಕಳೆ ಇವರುಗಳನ್ನು ಸಹ ಗೌರವಿಸಲಾಯಿತು. ನಂತರ ವಿಜಯ ಮಲ್ಟಿಸ್ಪೆಷಾಲಿಟಿ ಡೆಂಟಲ್ ಆಸ್ಪಿಟಲ್ ದಂತವೈದ್ಯ ಡಾ.ವಿಜಯಕುಮಾರ್ ಬಿರಾದಾರ ಹಾಗೂ ಅವರ ಧರ್ಮ ಪತ್ನಿಯನ್ನು ಶಾಸಕರು, ಮುಖಂಡರು, ವೈದ್ಯರು ಸನ್ಮಾನಿಸಿದರು.
ನಿವೃತ್ತ ಎಎಸ್ ಐ ಸತ್ಯಪ್ಪ ಸ್ವಾಗತಿಸಿದರು.