‘ನೀರಲಕೊಪ್ಪ’ ಮೊಹರಂ ವಿಶಿಷ್ಟ ವಿಭಿನ್ನ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ‘ನೀರಲಕೊಪ್ಪ’ ಎಂಬುದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುಟ್ಟ ಗ್ರಾಮ. ಇಲ್ಲಿನ ‘ಮೊಹರಂ’ ಆಚರಣೆ ಮಾತ್ರ ಇನ್ನಷ್ಟು ವಿಶಿಷ್ಟ ಹಾಗೂ ವಿಭಿನ್ನ ಅಂದ್ರೆ ತಪ್ಪಾಗಲಾರದು..!

ಕೇವಲ 150 ಕುಟುಂಬಗಳನ್ನು ಹೊಂದಿರುವ ಈ ಪುಟ್ಟ ಗ್ರಾಮದಲ್ಲಿ ಹಿಂದುಗಳ ಕುಟುಂಬಗಳು ಹೆಚ್ಚಾಗಿವೆ. ಆದ್ರು ಕೂಡಾ, ಸಾಮರಸ್ಯದ ಜೊತೆಗೆ ವೈಭವಯುತವಾಗಿ ಜರುಗುತ್ತಾ ಬಂದಿರುವ ಇಲ್ಲಿನ ಮೊಹರಂ ತನ್ನದೇ ಆದ ‘ಧಾರ್ಮಿಕ’ ಪರಂಪರೆ ಹೊಂದಿದೆ. ಇಂತಹ ಧಾರ್ಮಿಕ ಪರಂಪರೆಯ ಮೊಹರಂಗೆ ಕಳೆದ ಮೂವತ್ತೈದು ವರ್ಷಗಳಿಂದ ಪರಮ ಭಕ್ತನಾಗಿ ಇಲ್ಲಿನ ಮಸೀದಿಗೆ ಭೇಟಿ ನೀಡುತ್ತಾ ಬಂದಿರುವ ಗುರೂಜಿ ಶ್ರೀ ಅಂದನಗೌಡ್ರು ಮತ್ತು ಅವರ ಕುಟುಂಬಸ್ಥರು ಹಾಗೂ ಸಾವಿರಾರು ಜನ ಭಕ್ತರ ಭಾಗಿ ಮತ್ತಷ್ಟು ಮೆರಗು ನೀಡಿದೆ. ಅಲ್ಲದೆ, ಹಲವು ಪೂಜಾ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗಲು ಕಾರಣವಾಗಿದ್ದಾರೆ. ಅಲ್ಲದೆ, ವರ್ಷಕ್ಕಿಂತ ವರ್ಷಕ್ಕೆ ಹೆಚ್ಚು ಜನ ಭಕ್ತರ ಸಂಖ್ಯೆ ದ್ವಿಗುಣವಾಗುತ್ತಿದೆ. ಯಾರ ಆಜ್ಞೆ ಹಾಗೂ ಆದೇಶವಿಲ್ಲದೆ, ಭಕ್ತಿ ಪರಾಕಾಷ್ಠೆಯಿಂದ ಇಲ್ಲಿನ ಮಸೀದಿಗೆ ಸೇವೆ ಸಲ್ಲಿಸುವ ಇಲ್ಲಿನ ಭಕ್ತರು ಅಲಾಯಿ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದು ಸ್ವತಃ ಗುರೂಜಿಯವರು ಪತ್ರಿಕೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಜ್ಯ ಅಲ್ಲದೇ, ಹೊರ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಹಾಗೂ ಆಂದ್ರ ಪ್ರದೇಶದಿಂದ ಮಸೀದಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಐದು ದಿನಗಳ ಕಾಲ ಜರಗುವ ಮೊಹರಂ ಸೇರಿದಂತೆ ಉರಸು ಕಾರ್ಯಕ್ರಮಗಳು ಇಲ್ಲಿನವರ ಜನಮಾನಸದಲ್ಲಿ ಉಳಿದುಕೊಂಡಿವೆ. ಇಂತಹ ವಿಶಿಷ್ಟ ಮೊಹರಂ ಹಬ್ಬಕ್ಕೆ ಹೆಸರುವಾಸಿಯಾಗಿರುವ ನೀರಲಕೊಪ್ಪ ಗ್ರಾಮ ಸಂಪರ್ಕಕ್ಕಿರುವ ರಸ್ತೆ ಸೇರಿದಂತೆ ಇಲ್ಲಿಗೆ ಆಗಮಿಸುವವರಿಗೆ ವಸತಿ ಕಟ್ಟಡಗಳು ನಿರ್ಮಾಣವಾಗಬೇಕಾಗಿದೆ. ಅಲ್ಲದೆ, ಸರಕಾರ ಈ ಗ್ರಾಮದ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿರುವುದು ಬಾಕಿ ಇದೆ..!!

ಮೊಹರಂ ಹಬ್ಬದಲ್ಲಿ ಕೇವಲ ಮಸೀದಿಗೆ ಮಾತ್ರ ಅಲಂಕಾರ ಸೀಮಿತವಾಗಿರದೆ, ಗ್ರಾಮದಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ಗ್ರಾಮ ದೇವತೆ ಮತ್ತು ಶ್ರೀ ಆಂಜನೇಯ ದೇವಸ್ಥಾನಗಳ ಶೃಂಗಾರದ ಜೊತೆ ಜೊತೆಗೆ ಇಲ್ಲಿನ ಮೂರ್ತಿಗಳು ಪೂಜೆಗೊಳ್ಳುತ್ತಿರುವುದು ಭಾವೈಕ್ಯತೆಗೆ ಮತ್ತೊಂದು ಹೆಸರು ನೀರಲಕೊಪ್ಪ ಗ್ರಾಮ ಅಲ್ಲದೆ, ಮತ್ತೇನು ಅಲ್ಲವೇ..!?