ರಾಷ್ಟ್ರ ಧ್ವಜ ಗೌರವಿಸೋಣ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ರಾಷ್ಟ್ರ ಧ್ವಜದ ವಿಶೇಷ :

ಕೇಸರಿ, ಬಿಳಿ, ಹಸಿರು ಬಣ್ಣಗಳ ಮಧ್ಯದಲ್ಲಿ 24 ರೇಖೆಗಳುಳ್ಳ ನೀಲಿ ಬಣ್ಣದ ಅಶೋಕ ಚಕ್ರವಿದೆ. ಭಾರತ ದೇಶದ ಹಲವು ಧರ್ಮ, ಪಂಥ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಗಳ ಜನರನ್ನು ಒಗ್ಗೂಡಿಸಿ, ‘ನಾವೇಲ್ಲ ಭಾರತೀಯರು..! ನಾವೆಲ್ಲರೂ ಒಂದೇ’..!! ಎಂಬ ಭಾವನೆವೊಂದಿಗೆ ಒಂದೇ ತೀವರ್ಣ ರಾಷ್ಟ್ರಧ್ವಜದ ಧ್ವಜಾರೋಹಣದ ಬಳಿಕ ಗೌರವದೊಂದಿಗೆ ರಾಷ್ಟ್ರ ಗೀತೆ (ಜನ ಗಣ ಮನ) ಮೊಳಗಿಸುವ ಮೂಲಕ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ “ರಾಷ್ಟ್ರದ್ವಜ”. ಅದುವೇ.. ತ್ರಿವರ್ಣ ಬಾವುಟ (ತಿರಂಗಾ).

ರಾಷ್ಟ್ರ ಧ್ವಜದ ಅರ್ಥ :

ಹತ್ತಿ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ ರಾಷ್ಟ್ರ ಧ್ವಜದ ವಿನ್ಯಾಸಕಾರ ಪಿಂಗಳಿ ವೆಂಕಯ್ಯ ಅವರ 5 ವರ್ಷಗಳ ಸತತ ಅಭ್ಯಾಸ ಮತ್ತು ಶ್ರಮದಿಂದ ಹೊರಬಂದಿರುವ ರಾಷ್ಟ್ರ ಧ್ವಜ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ನೀಡಿದ ತ್ಯಾಗ ಬಲಿದಾನಗಳ ಐಕ್ಯತೆಯ ಹೆಮ್ಮೆಯ ಸಂಕೇತ. ಇದರಲ್ಲಿನ ಮೂರು ಬಣ್ಣಗಳು ತಮ್ಮದೇ ಆಗಿರುವ ಸಂದೇಶಗಳನ್ನು ಸಾರುತ್ತಿವೆ.

ಕೇಸರಿ :

ಧ್ವಜದ ಮೇಲ್ಭಾಗದಲ್ಲಿರುವ ಕೇಸರಿ ಬಣ್ಣವು ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆಯಲಿರುವ ಬಲಿದಾನಗಳ ಸಂಕೇತವಾಗಿದೆ.

ಬಿಳಿ :
ಧ್ವಜದ ಮಧ್ಯದಲ್ಲಿರುವ ಬಿಳಿ ಬಣ್ಣವು ಪವಿತ್ರ ಮನಸ್ಸಿನವರೊಂದಿಗೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಸಾಗಲು ಸತ್ಯ ಮಾರ್ಗದ ಸಂಕೇತವಾಗಿದೆ.

ಹಸಿರು :

ಧ್ವಜದ ಕೆಳಗಡೆಯಿರುವ ಹಸಿರು ಬಣ್ಣವು ತಾಯಿ ಭಾರತಾಂಭೆಯ ಹಸಿರು ಮಡಿಲಿನ ಸಂಕೇತವು ಹೌದಾಗಿದೆ. ಅಲ್ಲದೆ, ಪ್ರಕೃತಿಯೊಡನೆ ಮಾನವನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತವೆ.

ರಾಷ್ಟ್ರ ಧ್ವಜದ ವಿನ್ಯಾಸ :

ಭಾರತದ ತ್ರಿವರ್ಣ ಬಾವುಟವನ್ನು ಕೇವಲ ಕೈ ನೆಯ್ಗೆಯಿಂದಲೇ ಸಿದ್ಧಪಡಿಸಿದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು. ಅದು ಉಣ್ಣೆಯ ಅಥವಾ ರೇಷ್ಮೆ ನೂಲಿನಿಂದ ಇಲ್ಲವೇ ಹತ್ತಿಯ ನೂಲಿನಿಂದಾದರೇ ಅಡ್ಡಿಯಿಲ್ಲ. ಆದರೆ, ಅದು ಕೈ ನೂಲು ಮತ್ತು ಕೈ ನೆಯ್ಗೆಯದೇ ಆಗಿರಬೇಕು. ಕೇಸರಿ- ಬಿಳಿ- ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿರಬೇಕು. ನೀಲಿ ಚಕ್ರವು ಹೆಚ್ಚು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದ್ದು, ಅದರಲ್ಲಿ 24 ರೇಖೆಗಳಿವೆ. ಧ್ವಜದ ಉದ್ದ ಮತ್ತು ಅಗಲ (ಉದ್ದ 3 : ಅಗಲ 2) ಪ್ರಮಾಣದಲ್ಲಿರಬೇಕು ಎಂಬ ನಿಯಮಗಳಿವೆ.
ತ್ರಿವರ್ಣ ಬಾವುಟ ತಯಾರಿಸುವ ಹಕ್ಕು ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಉತ್ತರ ಕರ್ನಾಟಕದಾದ್ಯಂತ 52 ರಾಷ್ಟ್ರ ಧ್ವಜ ತಯಾರಿಕೆ ಘಟಕಗಳಿವೆ. ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ರಾಷ್ಟ್ರ ಧ್ವಜ ಇಲ್ಲದಿದ್ದರೆ ಇಡೀ ಧ್ವಜ ಉತ್ಪನ್ನವನ್ನು ಕೈಬಿಡಲಾಗುವ ನಿಯಮ ಜಾರಿಯಲ್ಲಿದೆ.

ರಾಷ್ಟ್ರ ಧ್ವಜಾರೋಹಣ ಬಳಿಕ ಗೌರವ ಸೂಚನೆಗಳು :

ರಾಷ್ಟ್ರ ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಲೇಬೇಕು. ಧ್ವಜಾರೋಹಣದಲ್ಲಿ ಹಸಿರು ಬಣ್ಣ ಕೆಳಗೆ ಇರುವಂತೆ ಕೇಸರಿ ಬಣ್ಣ ಮೇಲೆ ಇರುವಂತೆ ಕಡ್ಡಾಯವಾಗ ನೋಡಿಕೊಳ್ಳಬೇಕು.
ಧ್ವಜವನ್ನು ಶೀಘ್ರವಾಗಿ ಹಾರಿಸಬೇಕು ಮತ್ತು ಧ್ವಜ ಅವರೋಹಣದಲ್ಲಿ ನಿಧಾನಗತಿಯಲ್ಲಿ ಕೆಳಗಿಳಿಸಬೇಕು. ಸೂರ್ಯೋದಯದಿಂದ ಹಿಡಿದು, ಸೂರ್ಯಾಸ್ತದೊಳಗೆ ಹಾರಿಸಬೇಕು.
ರಾಷ್ಟ್ರ ಧ್ವಜವನ್ನು ಕೆಲವು ಕಡೆ ಎಲ್ಲ ದಿನಗಳಲ್ಲೂ (ಪ್ರಮುಖವಾಗಿ ಸರಕಾರಿ ಕೇಂದ್ರ ಕಚೇರಿಗಳಲ್ಲಿ ಹಾಗೂ ಗ್ರಾಮ ಪಂಚಾಯತಿ ಕಟ್ಟಡಗಳ ಮೇಲೆ) ಇನ್ನೂ ಕೆಲವು ಕಡೆ ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಹಾರಿಸಲಾಗುತ್ತದೆ.
ರಾಷ್ಟ್ರೀಯ ವಿಶೇಷ ದಿನಗಳ ಜೊತೆಗೆ ಸರಕಾರದ ನಿರ್ದೇಶನದ ಮೇರೆಗೆ ರಾಷ್ಟ್ರಮಟ್ಟದ ಆಚರಣೆಯ ಸಂದರ್ಭಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಬಹುದಾಗಿದೆ.
ವಿವಿಧ ಹವಾಮಾನದ ವೈಪರೀತ್ಯದಿಂದ ಧ್ವಜವು ಹಾಳಾಗದಂತೆ ಹಾರುತ್ತಿರುವ ಧ್ವಜವನ್ನು ಕಾಪಾಡಬೇಕು.
ಸಭೆ ಹಾಗೂ ಸಮಾರಂಭಗಳಲ್ಲಿ ವೇದಿಕೆ ಮೇಲೆ ಬಳಸುವಂತಿದ್ದಲ್ಲಿ ಸಭಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ಧ್ವಜ ಕಂಬದಿಂದ ಅದನ್ನು ಹಾರಿಸತಕ್ಕದ್ದು.
ಸಭೆ, ಸಮಾರಂಭಗಳು ಮತ್ತು ಸಮ್ಮೇಳನಗಳು ಇತರ ಕಾರ್ಯಕ್ರಮಗಳು ನಡೆಯುವಾಗ ವೇದಿಕೆಯ ಮೇಲಿರುವ ಅಧ್ಯಕ್ಷ ಸ್ಥಾನಕ್ಕಿಂತ ಎತ್ತರದಲ್ಲಿ ನಮ್ಮ ರಾಷ್ಟ್ರಧ್ವಜ ಹಾರಾಡತಕ್ಕದ್ದು.
ಸರಕಾರಿ ಸೇರಿದಂತೆ ಖಾಸಗಿ, ಅನುದಾನಿತ ಹಾಗೂ ಇನ್ನಿತರ ಶಾಲಾ ಕಾಲೇಜುಗಳು, ಕ್ರೀಡಾ ಶಿಬಿರಗಳು, ಸ್ಕೌಟ್ಸ್ ಶಿಬಿರಗಳು ನಂತರ ವಿಶೇಷ ಸಂದರ್ಭಗಳಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಶೇಷ ರಾಷ್ಟ್ರ ಗೌರವ, ದೇಶಾಭಿಮಾನ ಮೂಡಿಸಲು ರಾಷ್ಟ್ರಧ್ವಜ ಹಾರಿಸಬಹುದು.
ರಾಷ್ಟ್ರ ಧ್ವಜವನ್ನು ಉರಿಸುವುದಾಗಲಿ, ಉದ್ಧೇಶ ಪೂರ್ವಕವಾಗಿ ಸುಡುವುದಾಗಲಿ, ಕೆಡಿಸುವುದಾಗಲಿ, ಕಾಲಡಿಯಲ್ಲಿ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ, ರಾಷ್ಟ್ರ ಧ್ವಜದ ವಿರುದ್ಧ ಮಾತುಗಳು, ಅದರ ವಿರೋಧವಾದ ಬರಹಗಳು ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೆ, ಧ್ವಜವನ್ನು ವಸ್ತ್ರವಾನ್ನಾಗಿಸಿದರೆ, ಸುರಳಿ ಆಕಾರದಲ್ಲಿ ಹಿಡಿದಿಟ್ಟುಕೊಂಡರೆ, ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿಯಾಗುವರು.

ಸ್ವತಂತ್ರ ಭಾರತ ಮಾತೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ, ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರದ ಧ್ಯೇಯೋದ್ದೇಶಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ, ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಳಿಯಪಡಿಸುವುದೇ ನಮ್ಮ ರಾಷ್ಟ್ರ ಧ್ವಜವನ್ನು ಎಲ್ಲಾ ಕಡೆಗಳಲ್ಲಿ ಮೇಲಕ್ಕೆ ಹಾರಿಸುವ ಪ್ರಮುಖ ಉದ್ದೇಶವಾಗಿದೆ ಎಂಬ ನೀತಿ ನಿಯಮಾವಳಿಗಳು ದೇಶದಲ್ಲಿ ಜಾರಿಯಲ್ಲಿವೆ. ಸ್ವಾತಂತ್ರ್ಯ ಹಾಗೂ ರಾಷ್ಟ್ರಾಭಿಮಾನದ ಸಂಕೇತವಾಗಿರುವ ರಾಷ್ಟ್ರ ಧ್ವಜವನ್ನು ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ತುಂಬಿದ ‘ಅಮೃತ ಮಹೋತ್ಸವದ’ ಈ ಶುಭ ಸಂದರ್ಭದಲ್ಲಿ ಯಾವೊಬ್ಬ ಪ್ರಜೆಯಿಂದಲೂ ಅವಮಾನವಾಗದಿರಲಿ ಎಂಬುದು ‘ಕೃಷಿ ಪ್ರಿಯ’ ಪತ್ರಿಕೆಯ ಆಶಯ..!!

ಜೈ ಹಿಂದ್..!

ಜೈ ಭಾರತ ಮಾತಾಕೀ..!!

 

(ಸುದ್ದಿ ಕೃಪೆ : ದೈಹಿಕ ಶಿಕ್ಷಣ ಪಠ್ಯ ಕ್ರಮ)