ನಾಪತ್ತೆಯಾದ ದಿನಗೂಲಿ ನೌಕರನ ಕುಟುಂಬಕ್ಕೆ ಉದ್ಯೋಗ ಭರವಸೆ

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ನಾಲ್ಕೈದು ತಿಂಗಳುಗಳಿಂದ ನಾಪತ್ತೆಯಾಗಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆಯ ದಿನಗೂಲಿ ನೌಕರನ ಕುಟುಂಬಕ್ಕೆ ನೌಕರಿ ನೀಡಲು ಪುರಸಭೆ ಆಡಳಿತ ಮಂಡಳಿ ಭರವಸೆ ನೀಡಿದೆ..!

ಕುಷ್ಟಗಿ ತಾಲೂಕಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೇಗೆ ನಾಪತ್ತೆಯಾಗಿರುವ ದಿನಗೂಲಿ ನೌಕರ ರಾಜಶೇಖರ ನಾಗೂರು ಎಂಬಾತನ ಪತ್ನಿ ಹಾಗೂ ಆತನ ಮೂವರು ಹೆಣ್ಣು ಮಕ್ಕಳು ಆಗಮಿಸಿ ಜೀವನೋಪಾಯಕ್ಕಾಗಿ ಏನಾದರೂಪರಿಹಾರ ಕಲ್ಪಿಸುವಂತೆ ಸಭೆಯಲ್ಲಿ ಅಂಗಲಾಚಿ ಕಣ್ಣೀರು ಸುರಿಸಿದ ಪ್ರಸಂಗ ಜರುಗಿತು.

ಸದಸ್ಯರಾದ ವಸಂತ ಮೇಲಿನಮನಿ ಹಾಗೂ ಮೈನುದ್ದಿನ್ ಮುಲ್ಲಾ ಸೇರಿದಂತೆ ಇತರೆ ಸದಸ್ಯರು, ಪುರಸಭೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ದಿನಗೂಲಿ ಟ್ರ್ಯಾಕ್ಟರ್ ಚಾಲಕನ ನೊಂದ ಕುಟುಂಬಕ್ಕೆ ಮಾನವೀಯ ದೃಷ್ಟಿಯಿಂದ ಪುರಸಭೆಯಲ್ಲಿ ಪರಿಹಾರ ಜೊತೆಗೆ ಉದ್ಯೋಗ ಕಲ್ಪಿಸಲು ಏನಾದರು ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರು, ಅಧಿಕಾರಿಗಳಿಗೆ ಒತ್ತಾಯಿಸಿದರು.

ಹೊರಗುತ್ತಿಗೆ ಆಧಾರದ ಮೇಲೆ ನೊಂದ ಕುಟುಂಬದ ಒಬ್ಬರಿಗೆ ನೌಕರಿ ನೀಡಲು ಸಭೆಯಲ್ಲಿ ಠರಾವು ಪಾಸ್ ಮಾಡಿ ಇನ್ನೆರಡು ದಿನಗಳಲ್ಲಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯಲಾಗುವುದು ಎಂದು ಪುರಸಭೆ ಅಧ್ಯಕ್ಷ ಗಂಗಾಧರಯ್ಯ ಸ್ವಾಮಿ ಕೆ.ಹಿರೇಮಠ ಅವರು ಭರವಸೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಹನುಮವ್ವ ಕೋರಿ, ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ರಾಜೇಶ್ ಪತ್ತಾರ, ಮುಖ್ಯಾಧಿಕಾರಿ ಬಿ.ಸಿ. ಬಂಡಿವಡ್ಡರ, ಪುರಸಭೆ ವ್ಯವಸ್ಥಾಪಕ ಶಣ್ಮುಕಪ್ಪ ಐಲಿ, ಚಿರಂಜೀವಿ ದೊಡ್ಡಮನಿ ಸೇರಿದಂತೆ ಸರ್ವ ಸದಸ್ಯರು ಹಾಗೂ ಪುರಸಭೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.!!