ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಕೃಷ್ಣಾ ಬಿ ಸ್ಕೀಂ ಏತ ನೀರಾವರಿ ಯೋಜನೆಗೆ ವಿದ್ಯುತ್ ಕಲ್ಪಿಸಲು ಜಿಲ್ಲೆಯ ಕುಷ್ಟಗಿಯಿಂದ ನಿಡಶೇಸಿ, ತಳುವಗೇರಿ ಹಾಗೂ ಚಳಗೇರಿ ಮಾರ್ಗವಾಗಿ ಹೈ ವೊಲ್ಟೇಜ್ ವಿದ್ಯುತ್ ಸಂಪರ್ಕ ಕಲ್ಪಿಸುವ ಹಿನ್ನೆಲೆಯಲ್ಲಿ ಕೆಬಿಜೆಎನ್ ಎಲ್ ಇಂಜಿನಿಯರಗಳು ರೈತರ ಜಮೀನುಗಳಲ್ಲಿ ಭಾರಿ ಗಾತ್ರದ ವಿದ್ಯುತ್ ಗೋಪುರಗಳನ್ನು ಅಳವಡಿಸಲು ಮುಂದಾಗಿದ್ದು, ಯಾವುದೇ ಮುನ್ಸೂಚನೆ ನೀಡದೇ ಕಾಮಗಾರಿ ಆರಂಭಿಸಿದ್ದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.!
ಆದರೆ, ನಿಡಶೇಸಿ ಗ್ರಾಮಕ್ಕೆ ಹೊಂದಿಕೊಂಡಿರುವ ರೈತರ ಜಮೀನುಗಳಲ್ಲಿ ವಿದ್ಯುತ್ ಗೋಪುರ ಅಳವಡಿಸಲು ತೆಗ್ಗುಗಳನ್ನು ಅಗೆಯಲಾಗುತ್ತಿದೆ. ವಿದ್ಯುತ್ ಗೋಪುರದ ತಂತಿಗಳು ರೈತರ ಜಮೀನುಗಳ ಮೇಲೆ ಹಾದು ಹೋಗುವುದರಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಈ ಕುರಿತು ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ಅಧಿಕಾರಿಗಳು ವಿದ್ಯುತ್ ಕಂಬಳಿಂದ ಗೋಪುರ ಅಳವಡಿಸಲು ಮುಂದಾಗಿರುವುದನ್ನು ರೈತರು ವಿರೋಧಿಸುತಿದ್ದಾರೆ.
ನಿಡಶೇಸಿ ಗ್ರಾಮಕ್ಕೆ ಹೊಂದಿಕೊಂಡಿರುವ ತಮ್ಮ ಜಮೀನುಗಳ ಮೇಲೆ ಹೈ ವೊಲ್ಟೇಜ್ ವಿದ್ಯುತ್ ತಂತಿ ಹಾದು ಹೋಗುವುದರಿಂದ ಮುಂದಿನ ದಿನಮಾನಗಳಲ್ಲಿ ಜಮೀನುಗಳನ್ನು ಪರಿವರ್ತಿಸಲು (ಎನ್.ಎ) ಇಲಾಖೆ ಅನುಮತಿಸುವುದಿಲ್ಲ. ಅಲ್ಲದೆ, ಯಾರು ಜಮೀನು ಖರೀದಿಗೆ ಮುಂದೆ ಬರುವುದಿಲ್ಲ. ಜಮೀನುಗಳ ಮೇಲೆ ಹಾದು ಹೋಗುವ ಹೈವೊಲ್ಟೇಜ್ ವಿದ್ಯುತ್ ತಂತಿಯ ಕೆಳಗಡೆ ಕೊಳವೆ ಬಾವಿ ಹಾಗೂ ದೊಡ್ಡ ಮರಗಳಿದ್ದು, ರೈತರಿಗೆ ಯಾವುದೇ ಮುನ್ಸೂಚನೆ
ನೀಡದೇ ಕಾಮಗಾರಿ ಆರಂಭಿಸಿರುವುದು ಎಷ್ಟು ಸರಿ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ವಿದ್ಯುತ್ ಗೋಪುರ ಅಳವಡಿಸುವ ಸಲುವಾಗಿ ಭೂಮಿ ಅಗೆಯಲು ಬಂದಿರುವ ಅಧಿಕಾರಿಗಳನ್ನು ವಿಚಾರಿಸಿದರೆ ರೈತರ ಮೇಲೆ ರೇಗಾಡುತಿದ್ದಾರೆ. ಪೊಲೀಸ್ ಪ್ರೊಟೆಕ್ಷನ್ ಪಡೆದು, ಕೆಲಸ ಮಾಡುತ್ತೇವೆ. ನಾವು ಅಧಿಕಾರಿಗಳಿದ್ದೇವೆ, ನೀವೇನು ಮಾಡಲು ಸಾಧ್ಯವೋ ಮಾಡಿಕೊಳ್ಳಿ ಎಂದು ಗದರಿಸುತಿದ್ದಾರೆ ಎಂದು ಆರೋಪಿಸಿರುವ ರೈತ ಮಲ್ಲಪ್ಪ ಕರೆಡೆಪ್ಪನವರ, ನನಗಿರುವುದು ಕೇವಲ ಒಂದು ಎಕರೇ ಜಮಿನಿನಲ್ಲಿ ಜೀವನ ನಡೆಸುತಿದ್ದೇನೆ. ನನ್ನ ಜಮೀನಿನ ಬೋರ್ವೆಲ್ ಮೇಲೆ ಹೈವೊಲ್ಟೇಜ್ ವಿದ್ಯುತ್ ಹಾದು ಹೋಗುವುದರಿಂದ ಜಮೀನಿಗೆ ಮತ್ತು ಬೋರ್ವೆಲಗೆ ತೊಂದರೆಯಾಗುತ್ತದೆ. ಹಾಗಾಗಿ ಸಂಬಂಧಿಸಿದ ಇಲಾಖೆ ಹಾಗೂ ಸರ್ಕಾರ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ಸೂಕ್ತ ಪರಿಹಾರ ಕಲ್ಪಿಸಿ ನಂತರ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.!!