ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕೊಪ್ಪಳ ತಾಲೂಕಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕಾ ಪಂಚಾಯಿತಿ ಕ್ಷೇತ್ರಗಳನ್ನು ಮರು ವಿಂಗಡಿಕರಿಸಿ ಜಿಲ್ಲಾಧಿಕಾರಿಗಳಿಗೆ ಕೊಪ್ಪಳ ತಹಸೀಲ್ದಾರ ಅವರು ದಿನಾಂಕ 14-06-2022 ರಂದು ಸಲ್ಲಿಸಿದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಜಿಲ್ಲೆಯ ತುಂಬೆಲ್ಲಾ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ..!
2011 ರ ಜನಸಂಖ್ಯೆ (2,88,095 ಒಟ್ಟು ಕೊಪ್ಪಳ ತಾಲೂಕು ಜನಸಂಖ್ಯೆ) ಆಧಾರದ ಮೇಲೆ ವಿಂಗಡಿಕರಿಸಿದ ಪ್ರಕಾರ 8 ಜಿಪಂ ಕ್ಷೇತ್ರಗಳು ಹಾಗೂ 25 ತಾಪಂ ಕ್ಷೇತ್ರಗಳಿಗೆ ಸೀಮಿತಗೊಳಿಸಲಾಗಿದೆ. 49,507 ಜನಸಂಖ್ಯೆ ಹೊಂದಿದ ಹುಲಗಿ ಜಿಪಂ ಕ್ಷೇತ್ರವು ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ. 29,124 ಜನಸಂಖ್ಯೆ ಹೊಂದಿದ ಬೆಟಗೇರಿ ಜಿಪಂ ಕ್ಷೇತ್ರವು ತಾಲೂಕಿನಲ್ಲಿಯೇ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿದ ಜಿಪಂ ಕ್ಷೇತ್ರವಾಗಿ ಹೊರಹೊಮ್ಮಿದೆ. ಕವಲೂರು ಜಿಪಂ ಕ್ಷೇತ್ರದ ಹೆಸರನ್ನು ಬೆಟಗೇರಿ ಜಿಪಂ ಕ್ಷೇತ್ರ ಎಂದು ಮರು ನಾಮಕರಣ, ಕೆಲ ಜಿಪಂ ಕ್ಷೇತ್ರಗಳಿಗೆ ಕೆಲ ಗ್ರಾಮಗಳ ಸೇರ್ಪಡೆ ಜೊತೆಗೆ ಕ್ಷೇತ್ರಗಳಿಂದ ಗ್ರಾಮಗಳನ್ನು ಅದಲು, ಬದಲುಗೊಳಿಸಿರುವುದನ್ನು ಬಿಟ್ಟರೆ, ಈ ಹಿಂದೆ ಜಾರಿಯಲ್ಲಿದ್ದ ಒಟ್ಟು 8 ಜಿಪಂ ಕ್ಷೇತ್ರಗಳ ಸಂಖ್ಯೆಯಲ್ಲಿ ಬದಲಾವಣೆಯಾಗಿಲ್ಲ. ಈ ಹಿಂದೆ ಜಾರಿಯಲ್ಲಿದ್ದ 29 ತಾಪಂ ಕ್ಷೇತ್ರಗಳ ಪೈಕಿ ಮರು ವಿಂಗಡಣೆಯಲ್ಲಿ 25 ತಾಪಂ ಕ್ಷೇತ್ರಗಳಿಗೆ ಸೀಮಿತಗೊಳಿಸಲಾಗಿದೆ. ಕಳೆದ ವರ್ಷ ಕೈಗೊಂಡಿದ್ದ ಮರು ವಿಂಗಡಣೆಯಲ್ಲಿ ಸಂಸದ ಸಂಗಣ್ಣ ಕರಡಿಯವರ ತವರು ಕೂಕನಪಳ್ಳಿ ತಾಪಂ ಕ್ಷೇತ್ರವನ್ನು ಕೈ ಬಿಡಲಾಗಿತ್ತು. ಆದರೆ, ಈ ನೂತನ ಪಟ್ಟಿಯಲ್ಲಿ ಕೂಕನಪಳ್ಳಿ ತಾಪಂ ಕ್ಷೇತ್ರ ಜಾರಿಯಲ್ಲಿರುವುದು ವಿಶೇಷ..!!