ಕುಕನೂರು ನವೋದಯ ಶಾಲೆಗೆ ಸೌಕರ್ಯ ನೀಡಲು ಒತ್ತಾಯ

 

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಕನೂರ ಜವಾಹರ್ ನವೋದಯ ವಿದ್ಯಾಲಯದಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಪೋಷಕ ಶಿಕ್ಷಕರ ಮಂಡಳಿ ಸದಸ್ಯರು ಹಾಗೂ ಪಾಲಕರು ಸಚಿವ ಹಾಲಪ್ಪ ಆಚಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು..!

ಪಾಲಕರ ಮನವಿಗೆ ಸ್ಪಂದಿಸಿದ ಸಚಿವರು ಜಿಲ್ಲಾಧಿಕಾರಿ ಸುಂದರೇಶ ಬಾಬು ಅವರಿಗೆ ದೂರವಾಣಿ ಕರೆ ಮಾಡಿ ತಾವು ಖುದ್ದು ವಿದ್ಯಾಲಯಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು. ಶೀಘ್ರ ಹಣ ಬಿಡುಗಡೆ ಮಾಡಿ ಮೂಲಭೂತ ಸೌಕರ್ಯ ಒದಗಿಸಬೇಕು. ಶೀಥಿಲಾವಸ್ಥೆ ತಲುಪಿರುವ ಕಟ್ಟಡಗಳನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.

ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಮೇಲ್ಚಾವಣಿಯ ನಿಮೆಂಟ್ ಉದುರುತ್ತಿದೆ. ಹಳೆಯ ಶೌಚಾಲಯಗಳು ಕಡಿಮೆ ಸಂಖ್ಯೆಯಲ್ಲಿದ್ದು ಅವುಗಳೂ ಕೂಡ ದುರಸ್ತಿ ಕಾಣದೆ ಗಬ್ಬು ನಾರುತ್ತಿವೆ. ಕುಡಿಯುವ ನೀರು ಪ್ಲೋರೈಡ್‍ಯುಕ್ತವಾಗಿದ್ದು ಕುಡಿಯಲು ಯೋಗ್ಯವಿಲ್ಲ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿ ವಸತಿ ಗೃಹಗಳ ಕಿಟಕಿ ಬಾಗಿಲುಗಳು ಹಾಳಾಗಿವೆ. ಜಾಲರಿಗಳು ಸಹ ಇಲ್ಲದಿರುವುದರಿಂದ ಸೊಳ್ಳೆಗಳ ತಾಣವಾಗಿದೆ. ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಚಳಿಗಾಲದಲ್ಲಿ ಮಕ್ಕಳು ಬಹಳ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಪಾಲಕರು ಸಚಿವರಿಗೆ ವಿವರಿಸಿದರು.

ಪಾಲಕರ ಸಮಿತಿ ಸದಸ್ಯರಾದ ಕುಬೇರ ಮಜ್ಜಿಗಿ, ಶಿವಾನಂದ ಪ್ಯಾಟಿ, ಉಮೇಶ ಬಸರಿಹಾಳ, ಮಂಜುನಾಥ ಬಂಡಿ, ಸುರೇಶ ಪಾಟೀಲ್, ಬಸವರಾಜ ಗೌಳೇರ, ಹನುಮಂತಪ್ಪ ಹಳ್ಳಿ, ಸಿದ್ದಯ್ಯ ಹಿರೇಮಠ, ಅಶೋಕ ವಾಲಿಕಾರ, ಪ್ರಶಾಂತ ದಂಡಿನ್, ಸುರೇಶ ಬೇನಾಳ್, ಶರಣಪ್ಪ ನೆಲಗಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು..!!

 

ಸುದ್ದಿ ಕೃಪೆ : ಕುಬೇರ ಮಜ್ಜಿಗಿ