ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಹೈದ್ರಾಬಾದ್ ಕರ್ನಾಟಕ ಭಾಗದವರಿಗೆ ‘ಉರ್ದು’ ಭಾಷೆ ಕೇವಲ ಹೇರಿಕೆ ಭಾಷೆಯಾಗಿಲ್ಲ..! ಮಾತೃ ಭಾಷೆ ಕನ್ನಡದ ಜೊತೆಗೆ ಇದೊಂದು ಅನಿವಾರ್ಯ ಭಾಷೆಯಾಗಿದೆ..!!
‘ಬಳ್ಳಾರಿ’ ಜಿಲ್ಲೆಯನ್ನು ಹೊರತುಪಡಿಸಿ, ಹೈದ್ರಾಬಾದ್ ಕರ್ನಾಟಕದ ಬೀದರ, ಗುಲಬರ್ಗಾ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯವರು ಅಪ್ಪಟ ಕನ್ನಡಿಗರು ಆದರೂ ಕೂಡಾ ಉರ್ದು ಭಾಷೆಯ ನಂಟನ್ನು ಕಡ್ಡಾಯವಾಗಿ ಹೊಂದಿದ್ದಾರೆ. ಇದಕ್ಕೆಲ್ಲಾ ಹೈದ್ರಾಬಾದ್ ನಿಜಾಮಶಾಹಿಗಳು ಕಾರಣರಾಗಿದ್ದಾರೆ. ನೂರಾರು ವರ್ಷಗಳ ಕಾಲ ನಮ್ಮನ್ನಾಳಿದ ಹೈದ್ರಾಬಾದ್ ನಿಜಾಮರು ಕಾರಣವು ಕೂಡಾ ಹೌದು. ಅಂದು ಹೈದ್ರಾಬಾದ್ ನಿಜಾಮರಿಂದ ಈ ಪ್ರದೇಶ ವಿಮೋಚನೆಗೊಂಡು ಸ್ವತಂತ್ರ ಭಾರತದೊಳಗೆ ವಿಲೀನವಾಗಿತು. ಆದರೆ, ಪ್ರದೇಶ ವಿಲೀನವಾದರೂ ಕೂಡಾ ಅವರ ಮಾತೃ ಉರ್ದು ಭಾಷೆಯಿಂದ ಮಾತ್ರ ವಿಮೋಚನೆ ಇಲ್ಲಿಯವರೆಗೂ ಆಗಲೇ ಇಲ್ಲ. ಈ ಪ್ರದೇಶದ ಕಂದಾಯ ಇಲಾಖೆಯ ಎಲ್ಲಾ ಮೂಲ ಕಾಗದ ಪತ್ರಗಳು ಉರ್ದು ಭಾಷೆಯಿಂದ ಕೂಡಿಕೊಂಡಿವೆ. ನಮ್ಮನ್ನಾಳಿದ ನಿಜಾಮರು ಈ ಭಾಗದವರಿಗೆ ಉರ್ದು ಭಾಷೆಯನ್ನು ಶಾಶ್ವತವಾಗಿ ಬಳುವಳಿ ನೀಡಿದಂತಾಗಿದೆ. ಈ ಭಾಗದವರು ‘ಉರ್ದು ಭಾಷೆ ವಿಮೋಚನೆಗಾಗಿಯೇ’ ಮತ್ತೊಂದು ಚಳುವಳಿ ಆರಂಭಿಸಬೇಕಾಗಿರುವ ಅನಿವಾರ್ಯತೆ ಎದುರಾಗಿದೆ ಅಂದರೆ, ತಪ್ಪಾಗಲಾರದು. ನಮ್ಮನ್ನು ಆಳುವ ಸರಕಾರಗಳು ಇತ್ತ ಕಡೆ ಗಮನ ಹರಿಸಬೇಕಾಗಿದೆ. ಈ ಭಾಗದಲ್ಲಿ ಕೇವಲ ಹೈಕ ವಿಮೋಚನೆ ದಿನಾಚರಣೆ, ಈ ಭಾಗಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಗೊಳಿಸುವ ಬದಲಾಗಿ ಇಲ್ಲಿನ ದಾಖಲೆಗಳಲ್ಲಿ ನಮೂದಿಸಲಾಗಿರುವ ಉರ್ದು ಭಾಷೆ ಸಮಸ್ಯೆ ಬಗೆಹರಿಸಿ, ಉರ್ದು ಭಾಷೆಯಿಂದ ಆಗಬಹುದಾದ ಸಾಕಷ್ಟು ಜಮೀನು ವ್ಯಾಜ್ಯಗಳಿಗೆ ಇತಿ ಶ್ರೀ ಹಾಡಬೇಕಾಗಿದೆ. ಈ ಭಾಗದ ಮೂಲ ಭೂ ದಾಖಲೆಗಳು, ರಾಜ್ಯದ ಇನ್ನುಳಿದ ಭಾಗಗಳಿಗೆ ಹೋಲಿಸಿದರೆ, ನೂರಾರು ವರ್ಷಗಳ ಹಿಂದೆ ಉಳಿದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಲ್ಲಿನ ಕಂದಾಯ ಇಲಾಖೆ ಮೂಲ ದಾಖಲೆಗಳು ಇನ್ನೂವರೆಗೂ ಉರ್ದು ಭಾಷೆಯ ಜೊತೆಗೆ ನಿಜಾಮರ ಪದ್ಧತಿಯಾಗಿರುವ ಗುಂಟಾ, ಆಣೆ, ಸಾಕಳ್ ಹಾಗೂ ಎಕರೆ ಇತ್ಯಾದಿ ಅಳತೆಗಳು ಚೈನ್ ಲೆಕ್ಕಾಚಾರದಲ್ಲಿವೆ. (ಒಂದು ಚೈನ್ = 33 ಫೀಟ್) ಇವುಗಳೆಲ್ಲವೂ ಮೀಟರಗಳಿಗೆ ಬದಲಾಗಬೇಕಾಗಿದೆ. ಎಲ್ಲಾ ಜಮೀನುಗಳ ಅಳತೆ ಜೊತೆಗೆ (ಟೊಂಚ್) ಮ್ಯಾಪ್ ಗಳು P T Sheet ಗಳಾಗಿ ಪರಿವರ್ತನೆಗಳಾಗಬೇಕಾಗಿದೆ. ಭಾಷಾ ಅನುವಾದದ ತೊಡಕಿನ ಹಿನ್ನೆಲೆಯಲ್ಲಿ ಈ ಭಾಗದಲ್ಲಿನ ಸಾವಿರಾರು ವ್ಯಾಜ್ಯಗಳು ಇನ್ನೂ ಬಗೆಹರಿಯದಂತಾಗಿವೆ. ಅಲ್ಲದೆ, ಉಳ್ಳವರ ಮತ್ತು ಭಾಷೆ ಬಲ್ಲವರ ಮೊಸಕ್ಕೆ ದಾರಿಯಾಗಿವೆ. ರಾಷ್ಟ್ರ ಭಾಷೆ ‘ಹಿಂದಿ’ ಹೇರಿಕೆ ಬಗ್ಗೆ ಮಾತನಾಡುವವರು ಮೊದಲು, ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜಮೀನುದಾರರಿಗೆ ಮಾತೃ ‘ಕನ್ನಡ’ ಭಾಷೆಯಲ್ಲಿಯೇ ಮೂಲ ದಾಖಲೆಗಳನ್ನು ದೊರಕಿಸಿಕೊಡುವುದರ ಬಗ್ಗೆ ಮೊದಲು ಮಾತನಾಡಬೇಕಾಗಿರುವುದು ಅವಶ್ಯಕತೆ ಇದೆ ಅಲ್ಲವೇ..!?