ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಬಾಗಲಕೋಟೆ (ಕೊಪ್ಪಳ) : ಜಿಲ್ಲೆಯ ಮಹಾಲಿಂಗಪೂರ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಪದವಿ ಕಾಲೇಜಿನ ನಾಲ್ಕನೇ ಸೆಮಿಸ್ಟರ್ ನಲ್ಲಿ ಅಭ್ಯಾಸ ಮಾಡುತ್ತಿರುವ ರನ್ನಬೆಳಗಲಿ ಗ್ರಾಮದ ವಿದ್ಯಾರ್ಥಿನಿ ಸಂಗೀತಾ ಬಸಪ್ಪ ಹೇಗಾಡಿ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾಳೆ..!
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ‘ಅಮೃತ ಮಹೋತ್ಸವದ’ ಹಿನ್ನೆಲೆಯಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ “ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಮಹಾನ್ ವ್ಯಕ್ತಿ” ಎಂಬ ವಿಷಯದ ಮೇಲೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಿತ್ತು. ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ ಸಂಗೀತಾ ಬಸಪ್ಪ ಹೇಗಾಡಿ ದೇಶದ ಮಹಾನ್ ಸ್ವಾತಂತ್ರ್ಯ ವೀರ ಸೇನಾನಿ ‘ಚಂದ್ರಶೇಖರ ಆಜಾದ್’ ಅವರ ಅಪ್ರತಿಮ ಹೋರಾಟದ ಕುರಿತು ಬರೆದಿರುವ ಸವಿವರವಾದ ಪ್ರಬಂಧಕ್ಕೆ ಪ್ರಥಮ ಸ್ಥಾನದ ಜೊತೆಗೆ 10 ಸಾವಿರ ರೂಪಾಯಿಗಳ ನಗದು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ನಾಡಿನ ಸುಮಾರು 1700 ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂಬುದು ವಿಶೇಷ. ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷರು, ಸರ್ವ ಸದಸ್ಯರು, ಮಹಾವಿದ್ಯಾಲಯದ ಪ್ರಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗ, ಪಾಲಕರು ಹಾಗೂ ಅಪಾರ ವಿದ್ಯಾರ್ಥಿ ಬಳಗವು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ ಎಂದು ಉಪನ್ಯಾಸಕ ಶಿವಲಿಂಗ ಸಿದ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!