ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ನ್ಯಾಯಾಂಗ ಇಲಾಖೆಯು ಶೀಘ್ರದಲ್ಲೇ ಪೇಪರ್ ಮುಕ್ತ ಆಗಲಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯ ಮತ್ತು ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರು ಅಭಿಪ್ರಾಯವ್ಯಕ್ತಪಡಿಸಿದರು.!
ಜಿಲ್ಲೆಯ ಕುಷ್ಟಗಿ ಪಟ್ಟಣದ
ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ನಿರ್ಮಿಸಲಾದ ಮೊದಲ ಮಹಡಿ ನ್ಯಾಯಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು..!
ಈಗಾಗಲೇ ದೇಶದ 30 ನ್ಯಾಯಾಲಯಗಳಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಅಳವಡಿಸಿಕೊಂಡು ಪೇಪರ್ ಮುಕ್ತ ಕೋರ್ಟ್ ಗಳು ಎಂದು ಘೋಷಿಸಲಾಗಿದೆ. ರಾಜ್ಯದ ಕೋರ್ಟ್ ಗಳು ಕೂಡ ಪೇಪರ್ ಲೆಸ್ ಆಗುವ ದಿನಗಳು ಬಹಳ ದೂರಿಲ್ಲ ಎಂದರು. ಕಂಪ್ಯೂಟರ್ ತಂತ್ರಜ್ಞಾನ ಬಳಕೆಯಲ್ಲಿ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ಪ್ರಪಂಚದಲ್ಲಿಯೇ ಸಿಲಿಕಾನ್ ಸಿಟಿ ಎಂದು ಕರೆಯಿಸಿಕೊಂಡಿದೆ. ಹಾಗಾಗಿ ನ್ಯಾಯಾಂಗ ಇಲಾಖೆ ಸಹ ಕೆಲವೇ ತಿಂಗಳುಗಳಲ್ಲೇ ಕಂಪ್ಯೂಟರ್ ತಂತ್ರಜ್ಞಾನ ಶೀಘ್ರದಲ್ಲೇ ಹೊಂದುವ ಸಾಧ್ಯತೆಯಿದೆ. ಹಾಗಾಗಿ ಹಿರಿಯ ಮತ್ತು ಕಿರಿಯ ವಕೀಲರು ಕಂಪ್ಯೂಟರ್ ಪ್ರಾಥಮಿಕ ಜ್ಞಾನ ಹೊಂದುವುದು ಅಗತ್ಯವಿದೆ. ಇಲ್ಲವಾದರೆ ನ್ಯಾಯಾಂಗದ ಕೆಲಸಗಳು ವಿಳಂಬವಾಗಲಿದೆ ಎಂದರು. ನ್ಯಾಯಾಂಗ ಇಲಾಖೆ ಮೂಲಸೌಕರ್ಯಗಳ ಕೊರತೆ ಮಧ್ಯೆಯೂ ನ್ಯಾಯಾಧೀಶರು ಸೇರಿ ಸಿಬ್ಬಂದಿ, ನ್ಯಾಯವಾದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇನ್ಮುಂದೆ ಇಲಾಖೆಯ ಕಾರ್ಯಗಳು ತ್ವರಿತಗತಿಯಲ್ಲಿ ಸಾಗಲು ಕಂಪ್ಯೂಟರ್ ತಂತ್ರಜ್ಞಾನ ಅಳವಡಿಕೆ ಅನಿವಾರ್ಯವಾಗಿದೆ. ಈ ಬಗ್ಗೆ ಕಳೆದ 20 ವರ್ಷಗಳಿಂದಲೂ ಹೈಕೋರ್ಟ್, ಸುಪ್ರೀಂ ಕೋರ್ಟಗಳಲ್ಲಿ ಸಭೆಗಳು ನಡೆದು, ಚರ್ಚೆಗಳಾಗಿವೆ. ಆದರೆ, ಕಾರ್ಯಗತವಾಗಿರಲಿಲ್ಲ. ಕೋವಿಡ್ ಬಂದ 2 ವರ್ಷಗಳಲ್ಲಿ ವರ್ಚುವಲ್ ಹಿಯರಿಂಗ್, ಇ- ಫೈಲಿಂಗ್ ವ್ಯವಸ್ಥೆ ಆರಂಭವಾಯಿತು. ಇದು ನಮಗೆ ಅಗತ್ಯ ಕೂಡ ಇತ್ತು ಎಂದರು. ಜಿಲ್ಲಾ ಹಿರಿಯ ಸತ್ರನ್ಯಾಯಾಧೀಶರಾದ ಬಿ.ಎಸ್.ರೇಖಾ, ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು, ಕೊಪ್ಪಳ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಶೇಖರ್ ಕಡಿವಾಳ, ಹಿರಿಯ ಶ್ರೇಣಿ ನ್ಯಾಯಾಧೀಶೆ ಸರಸ್ವತಿ ದೇವಿ, ಪ್ರಥಮ ದರ್ಜೆ ಸಿವಿಲ್ ನ್ಯಾಯಾಧೀಶ ಶಂಭುಲಿಂಗಯ್ಯ ಮೂಡಿಮಠ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸತೀಶ್ ಬಿ., ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೋಡಿ, ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ತಹಸೀಲ್ದಾರ್ ಗುರುರಾಜ ಚೆಲುವಾದಿ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಇತರರು ಉಪಸ್ಥಿತರಿದ್ದರು..!!