ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ದುಶ್ಚಟಗಳಿಗೆ ಸಮಾಜದಲ್ಲಿ ಯಾರು ಕೂಡಾ ದಾಸನಾಗಬಾರದು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅಭಿಪ್ರಾಯ ವ್ಯಕ್ತಪಡಿಸಿದರು..!
ಅವರು ಜಿಲ್ಲೆಯ ಕುಷ್ಟಗಿ ಪಟ್ಟಣದ ಪಿಸಿಹೆಚ್ ಪ್ಯಾಲೇಸ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ಗಾಂಧಿ ಜಯಂತಿ ಸಂಭ್ರಮಾಚರಣೆಯ ನಿಮಿತ್ಯ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಹಮ್ಮಿಕೊಂಡಿದ್ದ ಗಾಂಧಿ ಸ್ಮೃತಿ ಹಾಗೂ ನವಜೀವನ ಸಮಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದುಶ್ಚಟಗಳಿಗೆ ಯಾರೊಬ್ಬರು ಬಲಿಯಾಗದಂತೆ ಧರ್ಮಸ್ಥಳ ಸಂಸ್ಥೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಇದು ನಾಡಿನ ಹಮ್ಮೆಯ ಸಂಗತಿ ಎಂದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸುಗಳ ಇಂದು ನನಸಾಗಬೇಕಾಗಿದೆ. ಈ ಹಿನ್ನಲೆಯಲ್ಲಿ ಶ್ರೀ ಧರ್ಮಸ್ಥಳ ಸಂಸ್ಥೆಯು ಸರಕಾರಕ್ಕಿಂತ ಪರಿಣಾಮಕಾರಿಯಾಗಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಒಂದು ಹೆಜ್ಜೆ ಮುಂದೆ ಇದ್ದಾರೆ ಎಂದರು.
ಜನಜಾಗೃತಿ ವೇದಿಕೆ ಹಿರಿಯ ಸಂಪನ್ಮೂಲ ವ್ಯಕ್ತಿ ಮಾಧವ ನಾಯರ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ದುಶ್ಚಟಗಳ ವಿರುದ್ಧ ಸಂಸ್ಥೆಯು ಸಮರ ಸಾರುತ್ತಾ ಬಂದಿದೆ. ಸ್ವಸ್ಥ ಸಮಾಜ ನಿರ್ಮಾಣದ ಕನಸಿನ ಹಿನ್ನಲೆಯಲ್ಲಿ ಸಂಸ್ಥೆಯು ಪ್ರತಿ ವರ್ಷ ಎರಡು ಲಕ್ಷದವರೆಗೂ ಜನರನ್ನು ದುಶ್ಚಟಗಳಿಂದ ವಿಮುಕ್ತರನ್ನಾಗಿಸುವ ಮಹತ್ವದ ಕಾರ್ಯಕ್ರಮ ಕೈಗೊಂಡಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಕೆಲ ನವ ಜೀವನ ಸಮಿತಿ ಸದಸ್ಯರು ತಮ್ಮ ವಯಕ್ತಿಕ ಜೀವನ ಅಭಿವೃದ್ಧಿಯತ್ತ ಸಾಗಿರುವ ಕುರಿತು ಅಭಿಪ್ರಾಯ ಹಂಚಿಕೊಂಡರು.
ವಿಮೆ ಚೆಕ್ ಸೇರಿದಂತೆ ವಿವಿಧ ಸಲಕರಣೆಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಗಿತು.
ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಅಧ್ಯಕ್ಷತೆವಹಿಸಿದ್ದರು. ಕುಷ್ಟಗಿ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ವೇದಿಕೆ ತಾಲೂಕಾಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಉಪಾಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಸಹ ಕಾರ್ಯದರ್ಶಿ ನೀಲಕಂಠಪ್ಪ ನಾಗಶೆಟ್ಟಿ ಮುಖಂಡರಾದ ಜನಾರ್ಧನ ಹುಲಿಗಿ, ನಿರ್ದೇಶಕ ಸದಾನಂದ ಬಂಗೇರ, ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಾ ಅಧಿಕಾರಿ ಶೇಖರ ಹಾಗೂ ಸಿಬ್ಬಂದಿ, ಅಭಿಮಾನಿಗಳು ಮತ್ತು ನೂರಾರು ಜನ ಅಧಿಕಾರಿಗಳು, ಸ್ವಸಹಾಯ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..!!