ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯಲ್ಲಿ ಇಲ್ಲಿಯವರೆಗೂ 3500 ಕ್ಕೂ ಅಧಿಕ ಜಾನುವಾರುಗಳು ಚರ್ಮ ಗಂಟು ರೋಗದಿಂದ ಬಳಲುತ್ತಿವೆ ಎಂದು ತಿಳಿದು ಬಂದಿದೆ..!
ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊಡತಗೇರಿ ಗ್ರಾಮದ ನೀಲಪ್ಪ ಸಾಂತಪ್ಪ ದ್ಯಾವಣ್ಣನವರ ಎಂಬುವರಿಗೆ ಸೇರಿದ ಎತ್ತೊಂದು ದಿನಾಂಕ 16-10-2022 ರಂದು ಬಲಿಯಾಗಿದೆ.
ಸುಮಾರು 40 ಸಾವಿರ ರೂಪಾಯಿಗಳ ಮೌಲ್ಯದ ಎತ್ತು ಚರ್ಮ ಗಂಟು ರೋಗದಿಂದ ಸಾವನ್ನಪ್ಪಿದೆ. ಸರಕಾರ ಸೂಕ್ತ ಪರಿಹಾರ ನೀಡುವಂತೆ ರೈತ ಕುಟುಂಬವು ಒತ್ತಾಯಿಸಿದೆ. ಮರಣೋತ್ತರ ಪರೀಕ್ಷೆಗಾಗಿ ಆಗಮಿಸಿದ ಪಶು ವೈದ್ಯಾಧಿಕಾರಿ ಡಾ.ಸಂತೋಷ ಕುದರಿ ಅವರು ರೋಗದ ಬಗ್ಗೆ ಸ್ಪಷ್ಟಪಡಿಸಿದರು. ಸಿಬ್ಬಂದಿ ವಾಯ್.ಎಲ್.ತುಂಬದ, ಶರಣಪ್ಪ ಕುಂಟೋಜಿ ಹಾಗೂ ಗ್ರಾಪಂ ಸದಸ್ಯ ಶರಣಪ್ಪ ಅಣ್ಣಿಗೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕುಷ್ಟಗಿ ತಾಲೂಕು ಸೇರಿದಂತೆ ಜಿಲ್ಲೆಯ ಜಾನುವಾರುಗಳಿಗೆ ಚರ್ಮ ಗಂಟು ರೋಗವು ಉಲ್ಬಣಗೊಳ್ಳುತ್ತಿದೆ. ನಿಯಂತ್ರಕ್ಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಕುಷ್ಟಗಿ ತಾಲೂಕಿನಲ್ಲಿಯೇ ಒಬ್ಬರೇ ಒಬ್ಬರು ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಜಾನುವಾರುಗಳಿಗೆ ಸಮರ್ಪಕವಾಗಿ ಚಿಕಿತ್ಸೆ ಸಾಧ್ಯವಾಗುತ್ತಿಲ್ಲವೆಂದು ಅನ್ನದಾತರ ಅಳಲಾಗಿದೆ. ಕೂಡಲೇ ಪಶು ಇಲಾಖೆಗೆ ವೈದ್ಯರು ಸೇರಿದಂತೆ ಸಿಬ್ಬಂದಿ ನೇಮಕಕ್ಕೆ ಮುಂದಾಗುವಂತೆ ರೈತರು ಒತ್ತಾಯಿಸಿದ್ದಾರೆ..!!