ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ರಾಜಕೀಯದಲ್ಲಿ ಸಾಕಷ್ಟು ಭರವಸೆಯ ಕನಸುಗಳನ್ನು ಕಟ್ಟಿಕೊಂಡಿದ್ದ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದ ಯುವಕ ಮಾರುತಿ (ಸಾಗರ) ಮುತ್ತಣ್ಣ ಮನ್ನಾಪೂರ (25) ಕಾರು ಅಪಘಾತದಲ್ಲಿ ಮೃತಪಟ್ಟಿರುವುದು ವಿಷಾದದ ಸಂಗತಿ..!
ಈಗತಾನೇ ರಾಜಕೀಯದಲ್ಲಿ ಬೆಳೆಯಬೇಕು. ಸಮಾಜ ಸೇವೆಮಾಡಬೇಕು. ಯುವಕರ ಆಶಾಕಿರಣವಾಗಬೇಕು ಎಂಬ ‘ಸಾಗರ’ದಷ್ಟು ಕನಸುಗಳನ್ನು ಹೊತ್ತುಕೊಂಡಿದ್ದ ಹದಿಹರಿಯದ ಯುವ ಮಿತ್ರನನ್ನು ಹನುಮನಾಳ ಗ್ರಾಮ ಕಳೆದುಕೊಂಡು ಮಮ್ಮನೆ ಮರಿಗಿಬಿಟ್ಟಿತ್ತು. ನೂರಾರು ಜನ ಯುವಕರ ಪಾಲಿನ ಆಶಾಕಿರಣವಾಗಿದ್ದ ಎಂಬುದಕ್ಕೆ ಮಾರುತಿಯ ಅಂತ್ಯ ಸಂಸ್ಕಾರಕ್ಕೂ ಮುನ್ನ ಮಿನಿ ‘ಸಾಗರ’ದಷ್ಟು ಹೊಂದಿದ್ದ ಗೆಳೆಯರ ಬಳಗ ಕಣ್ಣಿರು ಹಾಕಿದ್ದು ಮಾತ್ರ ಅಪ್ಪಟ ಸಾಕ್ಷಿ. ಮಗನನ್ನು ಕಳೆದುಕೊಂಡ ತಂದೆ ಮುತ್ತಣ್ಣ ಮನ್ನಾಪೂರ ಹಾಗೂ ತಾಯಿ, ದೊಡ್ಡಮ್ಮ, ಸಹೋದರರು, ಮಾವಂದಿರು, ಅಕ್ಕ, ತಂಗಿಯಂದಿರು ಸೇರಿದಂತೆ ಅಪಾರ ಸ್ನೇಹಿತರ ಆಕ್ರಂದನ ಮಾತ್ರ ಮುಗಿಲು ಮುಟ್ಟಿತ್ತು.
ಜನ್ಮದಿನದಂದು ಸಾಗರದೊಳ್ ಲೀನವಾದ : 11-11-2022 ರಂದು ಗ್ರಾಮದ ಮಿತ್ರರೆಲ್ಲರೂ ಮಾರುತಿಯ (ಸಾಗರ) ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂದು 25 ಕೆ.ಜಿ.ಕೇಕ್ ಹಾಗೂ ಸಿಹಿ ತಿನಿಸುಗಳೊಂದಿಗೆ ಸುಮಾರು 30 ಅಡಿಯಷ್ಟು ಉದ್ದದ ಕಟ್ಟೌಟ್ ನಿಲ್ಲಿಸಿ, ಕಾದು ಕುಳಿತವರಿಗೆ ರಾತ್ರಿ 10 ಗಂಟೆಯಾದರು ಮಾರುತಿ ಮಾತ್ರ ಬರಲಿಲ್ಲ. ಆದರೆ, ವಿಧಿ ಆಟ ಬೇರೆಯದ್ದೇ ಆಗಿತ್ತು. ಗುಲಬರ್ಗಾದಿಂದ ಗೆಳೆಯರೊಂದಿಗೆ ಮುದ್ದೇಬಿಹಾಳ ಬಳಿ ಆಗಮಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಪಲ್ಟಿಯಾಗಿ ಸ್ಥಳದಲ್ಲಿಯೇ ಮಾರುತಿ ಮೃತಪಟ್ಟು ಗ್ರಾಮಕ್ಕೆ ಶವವಾಗಿ ಬರುವಂತಾಗಿತು.
ಹೃದಯಘಾತ : ಮಾರುತಿ ಸಾವಿನ ಸುದ್ದಿ ತಿಳಿದ ಅದೇ ಓಣಿಯ ನಿವಾಸಿ ಸಿದ್ಧಾರೋಡ ಕುಂಬಾರ (52) ಇತನಿಗೆ ಲಘು ಹೃದಯಘಾತವಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಅಣತಿ ದೂರದಲ್ಲಿರುವ ಎರಡು ಮನೆಗಳಲ್ಲಿ ಸುತುಕ ವಾತಾವರಣದಿಂದ ಇಡೀ ಗ್ರಾಮವೇ ಸ್ಮಶಾನ ಮೌನದ ವಾತಾವರಣದಲ್ಲಿತ್ತು..!!