ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಬೀಗ ಹಾಕಿರುವುದನ್ನು ಗಮನಿಸಿದ ಡಿಡಿಪಿಐ ಮುತ್ತುರಡ್ಡಿ ರಡ್ಡೇರ ಅವರು ಶಾಲೆಯ ಮುಖ್ಯಗುರುಗಳ ಮೇಲೆ ಗರಂ ಆದ ಘಟನೆ ಜರುಗಿತು..!
ದಿಢೀರನೆ ಶಾಲೆಗೆ ಭೇಟಿ ನೀಡಿದ ಡಿಡಿಪಿಐ ಅವರು ಶಾಲೆಗೆ ಬೀಗ ಹಾಕಿದ್ದನ್ನು ಗಮನಿಸಿ, ಶಾಲೆ ಬೀಗಕ್ಕೆ ಕಾರಣವೇನೆಂದು ಜೊತೆಯಲ್ಲಿದ್ದ ತಾಲೂಕಾ ಮಟ್ಟದ ಅಧಿಕಾರಿಗಳನ್ನು ಪ್ರಶ್ನಿಸಿದರು. ಶಾಲೆಯ ಒಟ್ಟು 560 ವಿದ್ಯಾರ್ಥಿಗಳ ಪೈಕಿ, 60 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದು ಹೋಗಿರುವ ಕಾರಣಕ್ಕೆ ಇಡೀ ಶಾಲೆಗೆ ಬೀಗ ಹಾಕಿ, ಸಿಬ್ಬಂದಿ ವರ್ಗ ತಮ್ಮ ಗ್ರಾಮಗಳಲ್ಲಿಯೇ ರಜೆ ಮಜಾ ಪಡೆದಿರುವುದಕ್ಕೆ ಡಿಡಿಪಿಐ ಸಿಟ್ಟಿಗೆ ಪ್ರಮುಖ ಕಾರಣವಾಗಿತು. ಪ್ರವಾಸಕ್ಕೆ ಹೋಗಿರುವ 3 ಜನ ಸಿಬ್ಬಂದಿ ಬಿಟ್ಟು ಇನ್ನೂಳಿದ ಶಿಕ್ಷಕರು ಏತಕ್ಕೆ ಶಾಲೆಗೆ ಆಗಮಿಸಿಲ್ಲ ಎಂದು ಪ್ರಶ್ನಿಸಿ, ಕಾರಣರಾದವರಿಗೆ ಕೂಡಲೇ ನೊಟೀಸ್ ನೀಡಲು ಜೊತೆಯಲ್ಲಿದ್ದ ಅಧಿಕಾರಿಗಳಿಗೆ ಡಿಡಿಪಿಐ ಸೂಚನೆ ನೀಡಿದರು.
ಭೇಟಿ : ಗಡಚಿಂತಿ, ಮಾಲಗಿತ್ತಿ ಪ್ರೌಢ ಶಾಲೆ, ನಿಲೋಗಲ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಡಿಡಿಪಿಐ ಅವರು ಭೇಟಿ ನೀಡಿ, ಆಡಳಿತಾತ್ಮಕವಾಗಿ ಪರಿಶೀಲನೆ ಮಾಡಿದರು. ಶಾಲೆಯ ಮುಖ್ಯ ಗುರುಗಳಿಗೆ ಶಾಲೆಯ ಸ್ವಚ್ಛತೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ, ಬಿಸಿಯೂಟ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಕುರಿತು ಮುಖ್ಯಗುರುಗಳು ಸೇರಿದಂತೆ ಸಿಬ್ಬಂದಿ ವರ್ಗದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಳಿಕ ಹನುಮನಾಳ ಸರಕಾರಿ ಪ್ರೌಢ ಶಾಲೆಯಲ್ಲಿ ಈ ಭಾಗದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯಗುರುಗಳ ಜೊತೆಗೆ ಸಭೆ ನಡೆಸಿದರು.
ಪಾಠ ಮಾಡಿದ ಡಿಡಿಪಿಐ : ಹನುಮನಾಳ ಸರಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿ ಮಕ್ಕಳಿಗೆ ಸ್ವತಃ ಡಿಡಿಪಿಐ ಅವರು ಪಾಠ ಮಾಡಿದ ಪ್ರಸಂಗ ಜರುಗಿತು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಲು ಶಿಕ್ಷಕರಿಗೆ ಸೂಚನೆ ನೀಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ, ಇಸಿಓ ದಾವಲಸಾಬ್, ಶಿವಾನಂದ, ಬಿಆರ್ ಪಿಗಳಾದ ಡಾ.ಜೀವನಸಾಬ್ ವಾಲಿಕಾರ್, ಶರಣಪ್ಪ ತಮ್ಮಿನಾಳ, ಶ್ರೀಕಾಂತ ಬೇಟಗೇರಿ, ಶರಣಗೌಡ ಗೌಡ್ರ, ವಸಂತ ರಾಜೂರು, ಹನುಮಂತ ಗೋಡೆಕಾರ, ವಿಠ್ಠಲ ಪತ್ತಾರ, ಶರಣಪ್ಪ ತುಮರಿಕೊಪ್ಪ, ಮಂಜುನಾಥ ಪೂಜಾರ, ಯಮನಪ್ಪ ಕುರಿ, ಶೇಖರಪ್ಪ ಕುರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..!!