ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದಂದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ (KRPP) ಎಂಬ ಹೆಸರಿನ ನೂತನ ರಾಜಕೀಯ ಪಕ್ಷವನ್ನು ಕಟ್ಟುವುದಾಗಿ ಗಂಗಾವತಿಯಲ್ಲಿ ಅಧಿಕೃತವಾಗಿ ಮಾಜಿ ಸಚಿವ ಜನಾರ್ಧನರೆಡ್ಡಿ ಘೋಷಿಸಿಕೊಂಡಿದ್ದಾರೆ..!

ವಿಶ್ವಗುರು ಬಸವಣ್ಣನವರ ಸಮಾನತೆ ಹಾಗೂ ಅಜಾತ ಶತೃ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಎಂಬ ಇಬ್ಬರು ಮಹನೀಯರ ಆದರ್ಶಗಳನ್ನು ಮುಂದಿಟ್ಟುಕೊಂಡು ಮುಂದಿನ ದಿನಮಾನಗಳಲ್ಲಿ ನೂತನ ರಾಜಕೀಯ ಜೀವನ ಆರಂಭಿಸುವುದಾಗಿ ರೆಡ್ಡಿ ತಿಳಿಸಿದ್ದಾರೆ. ಯಾರ ಸೇರ್ಪಡೆ, ಬೆಂಬಲ ಬಗ್ಗೆ ಸುಳಿವು ನೀಡದ ರೆಡ್ಡಿ ಅವರು, ತಮ್ಮ ರಾಜಕೀಯ ಪಕ್ಷ ರಾಜ್ಯದ ಸಮಗ್ರ ಜನತೆ ಕಲ್ಯಾಣದ ಉದ್ಧೇಶವಿಟ್ಟುಕೊಂಡಿದೆ. ವಿಶೇಷವಾಗಿ ಬಸವಣ್ಣನವರ ಆಶಯದಂತೆ ಕಾಯಕ, ಸಮಾನತೆ ಹಾಗೂ ಸಮಗ್ರ ಅಭಿವೃದ್ಧಿ ಕನಸಿನೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನೀಡಲಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ನೀಡುವ ಇಂಗಿತವ್ಯಕ್ತಪಡಿಸಿದರು. ಈಗಾಗಲೇ ಟೆಂಪಲ್ ರನ್ನ ಮೂಡಿನಲ್ಲಿರುವ ರೆಡ್ಡಿ ಮಠಗಳು ಸೇರಿದಂತೆ ಪ್ರಮುಖ ದೇವಸ್ಥಾನಗಳಿಗೆ ವಿಶೇಷವಾಗಿ ಮಸೀದಿಗಳ ಅಭಿವೃದ್ಧಿಗೆ ಕೋಟಿ ಕೋಟಿ ರೂಪಾಯಿಗಳ ಅನುದಾನ ನೀಡುವ ಭರವಸೆಯೊಂದಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರವನ್ನೇ ಕೇಂದ್ರವಾಗಿಟ್ಟುಕೊಂಡು ರಾಜಕೀಯ ಆರಂಭಿಸಿದ್ದಾರೆ. ಆದರೆ, ಮುಂಬರುವ ದಿನಗಳಲ್ಲಿ ಮತದಾರ ಪ್ರಭುಗಳು ಹಣೆ ಬರಹ ನಿರ್ಧರಿಸಲಿದ್ದಾರೆ..!!
