ಗಂಗಾವತಿಯಲ್ಲಿ ‘ಗಾಲಿ’ ಉರುಳುತ್ತಾ..!?

 


ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಇಡೀ ರಾಜ್ಯಕ್ಕೆ ಘಟಾನುಘಟಿ ರಾಜಕೀಯ ನಾಯಕರುಗಳಿಗೆ ಜನ್ಮ ನೀಡಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಜನಾರ್ಧನರೆಡ್ಡಿ ಅವರ ರಾಜಕೀಯ ಪಕ್ಷ ಎಷ್ಟರ ಮಟ್ಟಿಗೆ ‘ಗಾಲಿ’ಯಾಗಿ ಉರಳುತ್ತಾ ಎಂಬ ವ್ಯಂಗ್ಯ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ..!?

ಹೆಚ್.ಜಿ ರಾಮಲು ಕುಟುಂಬ : ರಾಜಕೀಯ ಭೀಷ್ಮ ಎಂಬ ಖ್ಯಾತಿಯ ಮಾಜಿ ಸಂಸದ ಹೆಚ್.ಜಿ ರಾಮಲು ಸೇರಿದಂತೆ ಅವರ ಕುಟುಂಬದ ಸದಸ್ಯರು, ರೆಡ್ಡಿಯವರ ಮರು ರಾಜಕೀಯ ಹುಟ್ಟಿಗೆ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬೇರು ಬಿಡಲು ಎಷ್ಟರ ಮಟ್ಟಿಗೆ ಸಹಕಾರದ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿವೆ. ರಾಜಕೀಯದಿಂದ ಈಗಾಗಲೇ ಬಹು ದೂರ ಉಳಿದರು ಕೂಡಾ ಹೆಚ್.ಆರ್.ಜಿ ಕುಟುಂಬ ಮಾತ್ರ ಇಲ್ಲಿಯವರೆಗೂ ರಾಜಕೀಯದಲ್ಲಿ ತಮ್ಮದೇ ಆದ ಗ್ರಿಪ್ ಇಟ್ಟುಕೊಂಡಿರುವುದನ್ನು ಎಂದಿಗೂ ಅಲ್ಲಗಳೆಯುವಂತಿಲ್ಲ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಿಡಿದು, ಹಲವು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ಸಾಮಾಜಿಕ ಸೇವಾ ಮನೋಭಾವ ಹೊಂದಿದ ಹೆಚ್.ಜಿ ಆರ್ ಕುಟುಂಬಸ್ಥರು ಯಾವ ರೀತಿಯಲ್ಲಿ ರೆಡ್ಡಿಯವರಿಗೆ ಸ್ಪಂದಿಸಲಿದ್ದಾರೆ..? ಎಂಬ ಉಹಾ ಪೋಹದ ಮಾತುಗಳು ಹರಿದಾಡುತ್ತಿವೆ. ಅಲ್ಲದೆ, ರಾಮಲು ಕುಟುಂಬದಿಂದ ನೆರವು ಪಡೆದು, ಅಪಾರವಾಗಿ ಬೆಳೆದು ಈ ಸಧ್ಯ ತಿರುಗಿ ಬಿದ್ದಿರುವ ಹಲವು ನಾಯಕರುಗಳಿಗೆ ಇದು ಸೂಕ್ತ ಕಾಲವೆಂದು ರಾಮಲು ಕುಟುಂಬವು ರೆಡ್ಡಿಯವರ ಹೆಗಲ ಮೇಲೆ ಪಿಸ್ತೂಲ್ ಇಟ್ಟು ವೈರಿಗಳಿಗೆ ತಕ್ಕ ಪಾಠ ಕಲಿಸಬಹುದು.

ಪರಣ್ಣ ಮುನವಳ್ಳಿ : ಜನಾರ್ಧನರೆಡ್ಡಿ ಅವರ ಮೂಲ ಪಕ್ಷದ ಹಾಲಿ ಶಾಸಕ ಪರಣ್ಣ ಮುನವಳ್ಳಿ ಅವರ ರಾಜಕೀಯ ನಡೆ ಈ ಸಂದರ್ಭದಲ್ಲಿ ಹೇಗೆ ಇರುತ್ತೇ..! ಜನಾರ್ಧನರೆಡ್ಡಿ ಅವರು ಗಂಗಾವತಿಯಿಂದಲೇ ಸ್ಪರ್ಧೆ ಒಡ್ಡಿದರೇ.. ಪರಣ್ಣ ಮುನವಳ್ಳಿ ಅವರ ಗತಿ ಏನು..!? ಈಗಾಗಲೇ ಎರಡು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಹೊಂದಿದ ಅವರ ಗೆಲುವಿನ ಮೇಲೆ ಪರಿಣಾಮ ಬೀರಬಹುದಾ ಎಂಬ ಇತ್ಯಾದಿ ಮಾತುಗಳು ಕಮಲ ಪಾಳಯದಲ್ಲಿ ಸುಳಿದಾಡುತ್ತಿವೆ.

ಇಕ್ಬಾಲ್ ಅನ್ಸಾರಿ : ಆಡಳಿತಾರೂಢ ಬಿಜೆಪಿ ಮೇಲೆ ಸದಾ ಕತ್ತಿ ಬೀಸಿ, ಅಲ್ಪ ಅಸಂಖ್ಯಾತರ ಮತಗಳ ಮೇಲೆ ನಂಬಿಕೆ ಇಟ್ಟು ಜಯ ನನ್ನದೇ ಎಂದು ಬೀಗುತ್ತಿರುವ ಅನ್ಸಾರಿಯವರ ಈ ಸಧ್ಯದ ಇಕ್ಕಟ್ಟಿನ ಪರಿಸ್ಥಿತಿ ಹೇಗೆ ರೀ ಎಂದು ಕೈ ನಾಯಕರು ಒಳಗೊಳಗೆ ಕೈ.. ಕೈ… ಹಿಚಿಕಿಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಹಣದ ಹೊಳೆಯೇ ಹರಿದು, ಈ ಬಾರಿ ಯಾರಿಗೋ ಆಗಬೇಕಾಗಿದ್ದ ಗೆಲುವಿನ ಲಾಭ ಇನ್ಯಾರಿಗೋ ಆಗಿತಲ್ಲವೆಂಬ ಎಂಬ ಕುಹಕು ಮಾತುಗಳಿಗೆ ಏನು ಕಡಿಮೆ ಇಲ್ಲದಂತಾಗಿವೆ.

ಈ ಮೂರು ದೈತ್ಯ ರಾಜಕೀಯ ಹಿನ್ನೆಲೆ ಹೊಂದಿರುವ ಕುಟುಂಬಗಳ ಮಧ್ಯೆ ಮಾಜಿ ಸಚಿವ ಜನಾರ್ಧನರೆಡ್ಡಿ ಅವರು ಯಾವ ರೀತಿ ರಾಜಕೀಯ ಪವಾಡ ಮಾಡಲಿದ್ದಾರೆ..? ಬಳ್ಳಾರಿಯನ್ನು “ರೀ ಪಬ್ಲಿಕ್” ಆಗಿಸಿಕೊಂಡಿದ್ದವರಿಗೆ ಇದು ಯಾವ ದೊಡ್ಡ ಮಹಾ ಕೆಲಸ ಎಂದು ಒಂದು ಕಡೆ ಕೇಳಿ ಬರುತ್ತಿದೆ. ಆದರೆ, ಇದಕ್ಕೆ ವಿರೋಧವಾಗಿ ಅವಾಗ ರಾಷ್ಟ್ರೀಯ ಪಕ್ಷ ಕೇಸರಿ ಪಡೆ ಹಾಗೂ ದೈತ್ಯ ರಾಷ್ಟ್ರೀಯ ನಾಯಕರ ಬಾಹ್ಯ ಬೆಂಬಲದೊಂದಿಗೆ ಮೆರೆದ ರೆಡ್ಡಿ ಕುಟುಂಬ ಈಗ ಚಿದ್ರ ಚಿದ್ರವಾಗಿದೆ. ಈಗ ಎಲ್ಲಿಂದ ಬರುತ್ತೇ ಒಗ್ಗಟ್ಟು ಎಂಬ ಗೇಲಿ ಮಾತುಗಳು ಕೂಡಾ ತೇಲಾಡುತ್ತಿವೆ. ಮಠ ಮಾನ್ಯಗಳು ಅಲ್ಲದೆ, ಸಂತರು, ಶರಣರು, ಸೂಫಿಗಳ ಜೊತೆಗೆ ಹೆಂಡದ ದೊರೆಗಳ ನಾಡಿನಲ್ಲಿ ಅಕ್ರಮ ಗಣಿ ಲೂಟಿಯಿಂದ ತುಂಬಿದ ‘ಹಣದ ಗಾಲಿ’ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಯಾವ ರೀತಿ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ..!?